ನವದೆಹಲಿ : ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಂಟು ಹೊಂದಿದ್ದ ಲೇಡಿ ಡಾನ್‌ವೊಬ್ಬಳನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಯಶಸ್ವಿಯಾಗಿದೆ. ಖುಷ್ನುಮಾ ಅನ್ಸಾರಿ ಅಲಿಯಾಸ್ ನೇಹಾ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈಕೆ ಭೂಗತ ಜಗತ್ತಿನಲ್ಲಿ ‘ಮೇಡಂ ಜೆಹರ್’ ಎಂದೇ ಕುಖ್ಯಾತಿ ಪಡೆದಿದ್ದಳು ಎಂಬ ಅಂಶ ಬಯಲಾಗಿದೆ.
ಈಕೆಯೊಂದಿಗೆ ಗ್ಯಾಂಗ್‌ನ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ಬಾಬಿ ಕಬೂತರ್ ಅಲಿಯಾಸ್ ಮೆಹಫೂಜ್ ಮತ್ತು ಇತರ ಇಬ್ಬರನ್ನು ಮಹಿಪಾಲ್ಪುರ್ ಫ್ಲೈಓವರ್ ಬಳಿ ಬಂಧಿಸಲಾಗಿದೆ.
ಪಾರ್ಲರ್ ವೇಷದಲ್ಲಿ ಡ್ರಗ್ಸ್ ದಂಧೆ
ನೇಹಾ ಹೊರಜಗತ್ತಿಗೆ ಈಶಾನ್ಯ ದೆಹಲಿಯಲ್ಲಿ ಒಂದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಆದರೆ, ಪೊಲೀಸರ ತನಿಖೆಯ ಪ್ರಕಾರ ಈ ಪಾರ್ಲರ್ ಕೇವಲ ಒಂದು ಮುಖವಾಡವಾಗಿತ್ತು. ಇದರ ಹಿಂದೆ ಲಾರೆನ್ಸ್ ಬಿಷ್ಣೋಯ್ ಮತ್ತು ಹಶೀಂ ಬಾಬಾ ಗ್ಯಾಂಗ್‌ಗಳ ಮಾದಕ ವಸ್ತು ಜಾಲವನ್ನು ಈಕೆ ನಿರ್ವಹಿಸುತ್ತಿದ್ದಳು. ಸುಮಾರು ಏಳು ವರ್ಷಗಳಿಂದ ಬಾಬಿ ಕಬೂತರ್ ಜೊತೆ ಸಂಪರ್ಕದಲ್ಲಿದ್ದ ಈಕೆ, ಗ್ಯಾಂಗ್‌ನ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಬಂಧನದ ವೇಳೆ ಈಕೆಯಿಂದ ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂಸೆವಾಲಾ ಹತ್ಯೆಗೂ ನಂಟು
ಬಂಧಿತ ಬಾಬಿ ಕಬೂತರ್ ಕೇವಲ ಶಸ್ತ್ರಾಸ್ತ್ರ ಸರಬರಾಜುದಾರನಲ್ಲದೆ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಹತ್ಯೆಗೂ ಮುನ್ನ ಮೂಸೆವಾಲಾ ಅವರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಈತನೇ ನೇತೃತ್ವ ವಹಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ, ದೆಹಲಿಯ ಸೀಲಂಪುರ್ ಅವಳಿ ಕೊಲೆ ಪ್ರಕರಣ, ನಾದಿರ್ ಶಾ ಕೊಲೆ ಮತ್ತು ನಟಿ ದಿಶಾ ಪಟಾನಿ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಬಳಸಲಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಈತನೇ ಪೂರೈಸಿದ್ದ ಎಂಬ ಗಂಭೀರ ಆರೋಪವಿದೆ. ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಸಲೀಂ ಪಿಸ್ತೂಲ್ ಎಂಬಾತನಿಂದ ಈತ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದ ಎನ್ನಲಾಗಿದೆ.
ಹೆಚ್ಚುತ್ತಿರುವ ‘ಲೇಡಿ ಡಾನ್’ಗಳ ಹಾವಳಿ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಬಂಧನಕ್ಕೊಳಗಾದ ಮೂರನೇ ಲೇಡಿ ಡಾನ್ ನೇಹಾ ಆಗಿದ್ದಾರೆ. ಈ ಮೊದಲು ದೀಪಾ ಮತ್ತು ಜೋಯಾ ಖಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಈ ಮಹಿಳೆಯರು ಗ್ಯಾಂಗ್‌ನ ಕಾರ್ಯಾಚರಣೆ, ಹಣಕಾಸು ಮತ್ತು ಲಾಜಿಸ್ಟಿಕ್ಸ್ ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.
ತಾಂತ್ರಿಕ ಕಣ್ಗಾವಲು ಮತ್ತು ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಿದ ಪೊಲೀಸರ ವಿಶೇಷ ಘಟಕ, ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ರಾಷ್ಟ್ರ ರಾಜಧಾನಿ ವಲಯದಲ್ಲಿರುವ ಗ್ಯಾಂಗ್‌ನ ಇತರ ಸ್ಲೀಪರ್ ಸೆಲ್‌ಗಳು ಮತ್ತು ಅವರ ಹಣಕಾಸಿನ ಮೂಲಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ಬಂಧನದಿಂದ ಬಿಷ್ಣೋಯ್ ಗ್ಯಾಂಗ್‌ನ ದೆಹಲಿ ಜಾಲಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಇದನ್ನೂ ಓದಿ : ರುಂಡವಿಲ್ಲದ ಮಹಿಳೆಯ ಮೃ*ತದೇಹ ಪತ್ತೆ



















