ಬೆಂಗಳೂರು: ಬೈಕ್ ಟ್ಯಾಕ್ಸಿ ಸವಾರರೇ ಇನ್ನು ಮುಂದೆ ರಸ್ತೆಗೆ ಇಳಿದರೆ ನಿಮ್ಮ ವಾಹನ ಸೀಜ್ ಆಗಲಿದೆ. ಏಕೆಂದರೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಓಡಾಟಕ್ಕೆ ಕೋರ್ಟ್ ನೀಡಿದ್ದ ಗಡುವು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.
ಹೀಗಾಗಿ ಸಾರಿಗೆ ಇಲಾಖೆ ಅಲರ್ಟ್ ಆಗುತ್ತಿದೆ. ಜೂನ್ 16 ರಿಂದ ಬೈಕ್ ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸಿದರೆ ಸೀಜ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕೋರ್ಟ್ ಜೂನ್ 15ರ ವರೆಗೆ ಬೈಕ್ ಟ್ಯಾಕ್ಸಿ ಓಡಾಟ ಸ್ಥಗಿತಗೊಳಿಸಲು ಗಡುವು ನೀಡಿತ್ತು.
ಬೈಕ್ ಟ್ಯಾಕ್ಸಿ ಓಡಾಟಕ್ಕೆ ಮಾರ್ಗಸೂಚಿ ಹೊರಡಿಸಿ ಅಥವಾ ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸಿ ಎಂದು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ಜೂನ್ 16ರಿಂದ ಕಾರ್ಯಚರಣೆಗೆ ತಂಡ ರಚನೆ ಮಾಡಲಾಗಿದೆ. 10 ರಿಂದ 15 ತಂಡಗಳನ್ನು ಸಾರಿಗೆ ಇಲಾಖೆ ರಚನೆ ಮಾಡಿದೆ. ಜೂನ್ 15ರ ನಂತರ ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.