ಬೆಂಗಳೂರು: ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ಹೊರಟವರನ್ನೇ ಟಾರ್ಗೆಟ್ ಮಾಡಿ ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕುಂಭಮೇಳಕ್ಕೆ ಹೋಗುವುದಕ್ಕಾಗಿ ಗೂಗಲ್ ನಲ್ಲಿ ಸರ್ಚ್ ಮಾಡುವವರನ್ನೇ ಟಾರ್ಗೆಟ್ ಮಾಡಿ ಟೂರ್ ಮತ್ತು ಟ್ರಾವೆಲ್ಸ್ ಕಂಪನಿಯಿಂದ ಕಾಲ್ ಮಾಡಿ, ಎಲ್ಲ ರೀತಿಯ ಮಾಹಿತಿ ನೀಡುತ್ತಾರೆ. ಅದರಂತೆ ಹೋಗುವುದಕ್ಕಾಗಿ ಟ್ರಾವೆಲ್ಸ್ ಬುಕ್ ಮಾಡುತ್ತೇವೆಂದು ಹಣ ಹಾಕಿದರೆ ಸಾವಿರಾರೂ ರೂ. ವಂಚಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿ ವಂಚಿಸುತ್ತಿದ್ದಾರೆ. ಈ ರೀತಿಯ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ.
ಈ ಕುರಿತು ಜ್ಞಾನಭಾರತಿ ಠಾಣೆಯಲ್ಲಿ ಸೈಬರ್ ವಂಚಕರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಜ್ಞಾನಭಾರತಿ ಮೊದಲ ಹಂತದ ನಿವಾಸಿಯೊಬ್ಬರು ಮಹಾಕುಂಭಮೇಳಕ್ಕೆ ಹೋಗಲು ನಿರ್ಧರಿಸಿದ್ದರು. ಹೇಗೆ ಹೋಗಬೇಕು ಎಂಬ ಕುರಿತು ಗೂಗಲ್ ನಲ್ಲಿ ಸರ್ಚ್ ಮಾಡಿದ್ದರು. ಸರ್ಚ್ ಮಾಡಿದ ಕೆಲವೇ ಸಮಯದ ನಂತರ ಆ ವ್ಯಕ್ತಿಗೆ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಆ ಕರೆಯಲ್ಲಿ ನಾನು ರಾಕೇಶ್, ಸುಬ್ರಮಣ್ಯ ಟೂರ್ ಕಂಪನಿ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ನಮ್ಮದು ಟೂರ್ ಪ್ಯಾಕೇಜ್ ಕಂಪನಿಯಿದೆ. ನೀವು ಪ್ರಯಾಗ್ ರಾಜ್ ಗೆ ಹೋಗಲು ಮುಂದಾದರೆ ನಾವು ಕಡಿಮೆ ದರದಲ್ಲಿ ಮಹಾಕುಂಭಮೇಳಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆನಂತರ ವಾಟ್ಸಪ್ ನಲ್ಲಿ ಟ್ರಿಪ್ ಪ್ಲಾನ್ ಹಾಗೂ ಕಂಪನಿ ಫೇಸ್ ಬುಕ್ ಪೇಜ್ ಲಿಂಕ್ ಕಳಿಸಿದ್ದಾನೆ. ಆತನ ಬಣ್ಣದ ಮಾತು ನಂಬಿದ ದೂರುದಾರ ಹೋಗುವುದಾಗಿ ಒಪ್ಪಿಕೊಂಡಿದ್ದಾರೆ.
ನಂತರ ಹಂತ ಹಂತವಾಗಿ ಅಪರಿಚಿತ ವ್ಯಕ್ತಿ ನೀಡಿದ ಫೋನ್ ಪೇ ನಂಬರ್ ಗೆ 64 ಸಾವಿರ ರೂ. ಹಣ ಹಾಕಿದ್ದಾರೆ. ಹಣ ಹಾಕಿದ ನಂತರ ಕರೆ ಮಾಡಿದರೆ, ಆ ಅಪರಿಚಿತ ವ್ಯಕ್ತಿ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ದೂರುದಾರ ಕೂಡಲೇ ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸದ್ದಾರೆ. ನಂತರ ಜ್ಞಾನಭಾರತಿ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಕರೆ ಮಾಡಿದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿ, ಫೇಸ್ ಬುಕ್ ಪೇಜ್ ಡಿಲೀಟ್ ಮಾಡಿದ್ದಾನೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.