ಕ್ರಿಕೆಟ್ ಗೆ ಭಾರತ ಸ್ವರ್ಗ ಇದ್ದಂತೆ. ಈ ದೇಶದಲ್ಲಿ ಕ್ರಿಕೆಟ್ ಗೆ ಇರುವಷ್ಟು ಬೇಲೆ ಮತ್ತ್ಯಾವ ಆಟಕ್ಕೂ ಇಲ್ಲ. ಐಪಿಎಲ್ ನಿಂದ ಹಿಡಿದು ಯಾವುದೇ ಕ್ರಿಕೆಟ್ ಮ್ಯಾಚ್ ನಡೆಯಲಿ. ಜನ ಹುಚ್ಚೆದ್ದು ಬೆಂಬಲಿಸುತ್ತಾರೆ. ಹೀಗಾಗಿಯೇ ಐಪಿಎಲ್ ಲೀಗ್ ಭಾರತ ಭಾರೀ ಯಶಸ್ಸು ಕಂಡಿದೆ. ಹೀಗಾಗಿ ಮತ್ತೊಂದು ಲೀಗ್ ಆರಂಭಿಸಲು ಬಿಸಿಸಿಐ ಮುಂದಾಗಿದೆ.
ಐಪಿಎಲ್. ವರ್ಷದಿಂದ ವರ್ಷಕ್ಕೆ ಬಿಸಿಸಿಐ ಖಜಾನೆಯನ್ನು ದುಪ್ಪಾಟ್ಟಾಗಿಸುವಲ್ಲಿ ಐಪಿಎಲ್ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಈ ಲಾಭವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬಿಸಿಸಿಐ ಈ ಬಾರಿ ವಿಭಿನ್ನ ಲೀಗ್ ಆರಂಭಿಸಲು ಮುಂದಾಗಿದೆ. ಈ ಲೀಗ್ನಲ್ಲಿ ನಿವೃತ್ತ ಕ್ರಿಕೆಟಿಗರು ಕಣಕ್ಕಿಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ನಿವೃತ್ತ ಕ್ರಿಕೆಟಿಗರಿಗಾಗಿ ಹೊಸ ಲೀಗ್ ನ್ನು ಪ್ರಾರಂಭಿಸಲು ಅನೇಕ ಮಾಜಿ ಆಟಗಾರರು ಜೈ ಶಾ ಹತ್ತಿರ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗ ಬಿಸಿಸಿಐ ಕೂಡ ಆಸಕ್ತಿ ವಹಿಸಿದ್ದು, ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ ಎನ್ನಲಾಗಿದೆ.
ವಿಶ್ವದಾದ್ಯಂತ ಇಂತಹ ಹಲವಾರು ಲೀಗ್ ಗಳು ನಡೆಯುತ್ತಿವೆ. ಇವುಗಳಲ್ಲಿ ಮಾಜಿ ಕ್ರಿಕೆಟಿಗರು ಆಡುತ್ತಿದ್ದಾರೆ. ಇರ್ಫಾನ್ ಪಠಾಣ್, ಸುರೇಶ್ ರೈನಾ, ಯೂಸುಫ್ ಪಠಾಣ್, ಕ್ರಿಸ್ ಗೇಲ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಮುಂತಾದ ಆಟಗಾರರು ಇಂತಹ ಲೀಗ್ ಗಳ ಭಾಗವಾಗಿದ್ದಾರೆ. ಇವುಗಳಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್, ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮತ್ತು ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಮುಖ್ಯವಾಗಿವೆ. ಹೀಗಾಗಿ ಬಿಸಿಸಿಐ ಕೂಡ ಈ ರೀತಿಯ ಹೊಸ ಲೀಗ್ ಆರಂಭಿಸಿದರೆ, ಮಾಜಿ ಕ್ರಿಕೆಟಿಗರ ಅದೃಷ್ಟ ಮತ್ತೊಮ್ಮೆ ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಲೀಗ್ ಆರಂಭವಾದರೆ, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ, ಕ್ರಿಸ್ ಗೇಲ್, ಹರ್ಭಜನ್ ಸಿಂಗ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ದಿಗ್ಗಜ ಆಟಗಾರರು ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ. ಅವರ ಅಭಿಮಾನಿಗಳು ಮತ್ತೊಮ್ಮೆ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಮತ್ತು ಐಪಿಎಲ್ ನಲ್ಲಿ ಆಡದ ಆಟಗಾರರು ಮಾತ್ರ ಈ ಲೀಗ್ನಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ.