ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಪಿಗಾಗಿ ಐಸಿಸಿಯು ಬರೋಬ್ಬರಿ 544 ಕೋಟಿ ರೂ. ($ 65 ಮಿಲಿಯನ್) ಮೊತ್ತದ ಬಜೆಟ್ ಅನುಮೋದಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಈ ಟೂರ್ನಿಯ ಸಿದ್ಧತೆಗಳಿಗಾಗಿ ಹಾಗೂ ಪ್ರಶಸ್ತಿಗಳಿಗಾಗಿ ಈ ಮೊತ್ತ ವಿನಿಯೋಗಿಸಲಾಗುತ್ತದೆ. ಕೊಲಂಬೊದಲ್ಲಿ ನಡೆದ ಐಸಿಸಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾದ ಬಜೆಟ್ ನಲ್ಲಿ ಪಂದ್ಯಾವಳಿಯ ಕಾರ್ಯಾಚರಣೆಗಳಿಗಾಗಿ 292 ಕೋಟಿ ರೂ. ($35 ಮಿಲಿಯನ್), ಬಹುಮಾನ ಮೊತ್ತಕ್ಕಾಗಿ 167 ಕೋಟಿ ರೂ. ($20 ಮಿಲಿಯನ್) ಮತ್ತು ಉತ್ಪಾದನಾ ವೆಚ್ಚಕ್ಕಾಗಿ 83 ಕೋಟಿ ರೂ. ($10 ಮಿಲಿಯನ್) ವಿನಿಯೋಗಿಸಲು ಬಜೆಟ್ ನಲ್ಲಿ ನಿಗದಿ ಪಡಿಸಲಾಗಿದೆ.
ಈಗಾಲೇ ಚಾಂಪಿಯನ್ಸ್ ಟ್ರೋಫಿಗೆ ತಾತ್ಕಾಲಿಕ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದರೆ, ಭಾರತ ತಂಡ ಭಾಗವಹಿಸುವ ಕುರಿತು ಇನ್ನೂ ಅಂತಿಮ ನಿರ್ಧಾರ ಹೊರ ಬಿದ್ದಿಲ್ಲ. 2006ರ ನಂತರ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಆದರೆ ಮುಂದಿನ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿರುವುದರಿಂದ ಭಾರತ ತಂಡ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.
ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ನೀಡಿದರೂ, ಅದಕ್ಕೆ ಇತರೆ ಕ್ರಿಕೆಟ್ ಮಂಡಳಿಗಳು ಕೈ ಜೋಡಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿವೆ. ಇನ್ನೊಂದೆಡೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಿದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ. ಹೀಗಾಗಿ ಭಾರತದ ಪ್ರತಿ ಪಂದ್ಯಗಳಿಗೆ ಇತರೆ ತಂಡಗಳನ್ನು ಯುಎಇ ಅಥವಾ ಶ್ರೀಲಂಕಾಗೆ ಕಳುಹಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಪಾಕ್ ಕ್ರಿಕೆಟ್ ಮಂಡಳಿ ಐಸಿಸಿ ಮುಂದೆ ಇಡಲಿದೆ.
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಲಾಹೋರ್ ನ್ನು ಕೇಂದ್ರೀಕರಿಸಿ ಭಾರತದ ಪಂದ್ಯಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಆದರೆ, ಭಾರತ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುವುದರ ಮೇಲೆ ಎಲ್ಲವೂ ನಿಂತಿದೆ.