ಭಾರತ ಕ್ರಿಕೆಟ್ ತಂಡ 9ನೇ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಸಂತಸದಲ್ಲಿ ತೇಲಾಡುತ್ತಿರುವ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಿದೆ.
ದಕ್ಷಿಣ ಆಫ್ರಿಕಾವನ್ನು ಮಣಿಸಿದ ರೋಹಿತ್ ಪಡೆ ದಾಖಲೆಯ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದಿದೆ. ಈ ಚಾಂಪಿಯನ್ ಪ್ರದರ್ಶನಕ್ಕೆ ಟೀಂ ಇಂಡಿಯಾ ಐಸಿಸಿಯಿಂದ ಬರೋಬ್ಬರಿ 22.76 ಕೋಟಿ ರೂ.ಬಹುಮಾನ ಪಡೆದಿದೆ. ಆದರೆ, ಗೆದ್ದ ತನ್ನ ತಂಡಕ್ಕೆ ಮಾತ್ರ ಭಾರಿ ಗಾತ್ರದ ಬಹುಮಾನ ಘೋಷಿಸಿ, ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ. ಒಂದಲ್ಲ, ಎರಡಲ್ಲ ಬಿಸಿಸಿಐ ಬರೋಬ್ಬರಿ 125 ಕೋಟಿ ರೂ.ಗಳನ್ನು ಬಹುಮಾನವಾಗಿ ಘೋಷಿಸಿದೆ.

9ನೇ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಕ್ಕೆ ದಾಖಲೆಯ 125 ಕೋಟಿ ಬಹುಮಾನವನ್ನು ಘೋಷಿಸಿದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್ ಶಾ, ಚಾಂಪಿಯನ್ ಭಾರತ ತಂಡಕ್ಕೆ 125 ಕೋಟಿ ರೂಗಳನ್ನು ಬಹುಮಾನವಾಗಿ ಘೋಷಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಪಂದ್ಯಾವಳಿಯುದ್ದಕ್ಕೂ ತಂಡವು ಪ್ರತಿಭೆ, ದೃಢತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಟೀಂ ಇಂಡಿಯಾಗೆ ದಾಖಲೆಯ ಮೊತ್ತವನ್ನು ಬಹುಮಾನವನ್ನಾಗಿ ಘೋಷಿಸುವ ಮೂಲಕ ಬಿಸಿಸಿಐ ಇಡೀ ವಿಶ್ವ ಕ್ರಿಕೆಟ್ ಅಚ್ಚರಿಗೊಳ್ಳುವಂತೆ ಮಾಡಿದೆ. ಈ ಹಿಂದೆ ಯಾವ ಚಾಂಪಿಯನ್ ತಂಡಕ್ಕೂ ಈ ಗಾತ್ರದ ಬಹುಮಾನ ಸಿಕ್ಕಿರಲಿಲ್ಲ. ಹಿಂದೆ ಟೀಂ ಇಂಡಿಯಾ ಟಿ20 ವಿಶ್ವಕಪ್ ನ ಚೊಚ್ಚಲ ಆವೃತ್ತಿಯನ್ನು ಗೆದ್ದಾಗ ಬಿಸಿಸಿಐ ನೀಡಿದ ಬಹುಮಾನಕ್ಕೂ ಈಗಿನ ಬಹುಮಾನಕ್ಕೂ ಭಾರೀ ವ್ಯತ್ಯಾಸವಿದೆ. 2007ರಲ್ಲಿ ಭಾರತದ ಬದ್ಧ ವೈರಿ ಪಾಕ್ ಸೋಲಿಸಿದ್ದಾಗ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 2 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗಿತ್ತು. ಆದರೆ, ಈಗ ಭಾರೀ ಬಹುಮಾನ ನೀಡಿದೆ.
