ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನುಸುಳುಕೋರರ ಕುರಿತಂತೆ ಕುಟುಕು ಕಾರ್ಯಾಚರಣೆ ಮೂಲಕ ಸಂಗ್ರಹಿಸಿದ ದಾಖಲೆಗಳು ಅಪರಾಧ ಪ್ರಕರಣಗಳ ಮಾಹಿತಿಯನ್ನು ಡಿ.18, 2025ರಂದು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಹಾಗೂ ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್ ರಮೇಶ್ ತಿಳಿಸಿದ್ದಾರೆ.
ತಮ್ಮ ಸ್ನೇಹಿತ ಸುಧೀರ್ ಶೆಟ್ಟಿ ಅವರ ಸಹಕಾರದೊಂದಿಗೆ ನಡೆಸಿದ ಈ ಕುಟುಕು ಕಾರ್ಯಾಚರಣೆಯಲ್ಲಿ ಹಲವು ಆಘಾತಕಾರಿ ಅಂಶಗಳು ಬಯಲಾಗಿವೆ ಎಂದು ಎನ್. ಆರ್ ರಮೇಶ್ ಹೇಳಿದ್ದಾರೆ. ಅಕ್ರಮವಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳುವ ವಿಧಾನ, ನಕಲಿ ದಾಖಲೆಗಳ ಮೂಲಕ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಪಡೆಯುವ ಪ್ರಕ್ರಿಯೆಗಳು ಹಾಗೂ ಆರಂಭಿಕ ತಿಂಗಳುಗಳಲ್ಲಿ ಕೆಲಸ ಮಾಡುವ ಸ್ಥಳಗಳ ಕುರಿತು ವರದಿಯಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ.
ರಮೇಶ್ ಹೇಳಿಕೆಯ ಪ್ರಕಾರ, ಬೆಂಗಳೂರು ಮಹಾನಗರದ 60ಕ್ಕೂ ಹೆಚ್ಚು ಪ್ರದೇಶಗಳಲ್ಲಿ, ಚಿಕ್ಕಮಗಳೂರು, ಸಕಲೇಶಪುರ, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳ ಕಾಫಿ ಎಸ್ಟೇಟ್‌ಗಳಲ್ಲಿ, ಜೊತೆಗೆ ಹುಬ್ಬಳ್ಳಿ, ಬೆಳಗಾವಿ ಹಾಗೂ ಮಂಗಳೂರು ಮಹಾನಗರಗಳ ಹೊರವಲಯಗಳಲ್ಲಿ ದೊಡ್ಡ ಸಂಖ್ಯೆಯ ಬಾಂಗ್ಲಾ ನುಸುಳುಕೋರರು ನೆಲೆಸಿದ್ದಾರೆ ಎನ್ನಲಾಗಿದೆ. ಇವರು ತಮ್ಮ ಮೂಲ ಪ್ರದೇಶದ ಸಂಪರ್ಕಕ್ಕಾಗಿ ಸಾಮಾನ್ಯ ಕರೆಗಳ ಬದಲು ‘imo – international call & chat’ ಆ್ಯಪ್ ಬಳಕೆ ಮಾಡುತ್ತಾರೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದುವರೆಗೆ ಕರ್ನಾಟಕದಲ್ಲಿ ಬಾಂಗ್ಲಾ ನುಸುಳುಕೋರರು ಭಾಗಿಯಾಗಿದ್ದಾರೆ ಎನ್ನಲಾದ 19 ಅಪರಾಧ ಪ್ರಕರಣಗಳು ಅಧಿಕೃತವಾಗಿ ಪತ್ತೆಯಾಗಿವೆ ಎಂದು ಹೇಳಲಾಗಿದ್ದು, ಅವುಗಳ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆನೇಕಲ್ ತಾಲ್ಲೂಕಿನ ಜಿಗಣಿ ಸುತ್ತಮುತ್ತ ‘MEHDI FOUNDATION’ ಎಂಬ ಸಂಸ್ಥೆಯ ಕುರಿತು ಉಲ್ಲೇಖಿಸಿರುವ ರಮೇಶ್ ಎನ್.ಆರ್, ಈ ಸಂಸ್ಥೆಯ ಸದಸ್ಯರು ತಮ್ಮ ನಿಜ ಹೆಸರುಗಳನ್ನು ಮರೆಮಾಚಿಕೊಂಡು ಬೇರೆ ಗುರುತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಅಲ್ಲದೇ, ಈ ಸಂಸ್ಥೆಯ ಸದಸ್ಯರು ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವ ಪ್ರಕರಣವನ್ನು ಜಿಗಣಿ ಪೊಲೀಸರು ಪತ್ತೆಹಚ್ಚಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
ಈ ಎಲ್ಲಾ ಅಂಶಗಳಿಗೆ ಸಂಬಂಧಿಸಿದ ಕುಟುಕು ಕಾರ್ಯಾಚರಣೆ ದೃಶ್ಯಗಳು ಹಾಗೂ ಅಕ್ರಮ ನುಸುಳುಕೋರರು ನೆಲೆಸಿದ್ದಾರೆ ಎನ್ನಲಾದ ಪ್ರದೇಶಗಳ ವಿಡಿಯೋ ದಾಖಲೆಗಳನ್ನು ಒಳಗೊಂಡ ಸಂಪೂರ್ಣ ವರದಿಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಎನ್.ಆರ್. ರಮೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಸಚಿವ ಜಮೀರ್ ಆಪ್ತನ ಮನೆ ಮೇಲೆ ‘ಲೋಕಾ’ ದಾಳಿ ಕೇಸ್ | ಬಯಲಾಯ್ತು ಸರ್ಫರಾಜ್ ಖಾನ್ ಕೋಟಿ ಕೋಟಿ ಮೌಲ್ಯದ ಸಾಮ್ರಾಜ್ಯ!



















