ಕೊಲಂಬೊ: ಶ್ರೀಲಂಕಾ ವಿರುದ್ಧ ಬುಧವಾರ ನಡೆದ ಮೂರನೇ ಮತ್ತು ಅಂತಿಮ T20I ಪಂದ್ಯದಲ್ಲಿ ಬಾಂಗ್ಲಾದೇಶದ ಸ್ಪಿನ್ನರ್ ಮೆಹಿದಿ ಹಸನ್ (4-1-11-4) ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಇತಿಹಾಸ ನಿರ್ಮಿಸಿದ್ದಾರೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಪ್ರವಾಸಿ ಬೌಲರ್‌ನಿಂದ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸುವ ಮೂಲಕ, ಮೆಹಿದಿ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ 13 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
2012ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹರ್ಭಜನ್ ಸಿಂಗ್ 4-2-12-4 ಅಂಕಿಅಂಶಗಳನ್ನು ಸಾಧಿಸಿದ್ದರು. ಈ ದಾಖಲೆಯನ್ನು ಮೆಹಿದಿ ಹಸನ್ ಮೀರಿಸಿದ್ದಾರೆ. ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿನ ಒಟ್ಟಾರೆ ಅತ್ಯುತ್ತಮ ಬೌಲಿಂಗ್ ದಾಖಲೆ ಶ್ರೀಲಂಕಾದ ವನಿಂದು ಹಸರಂಗ (4-0-9-4, 2021ರಲ್ಲಿ ಭಾರತದ ವಿರುದ್ಧ) ಹೆಸರಿನಲ್ಲಿದೆ.
ಕೊಲಂಬೊ T20I ನಲ್ಲಿ ಪ್ರವಾಸಿ ಬೌಲರ್‌ಗಳಿಂದ ಅತ್ಯುತ್ತಮ ಅಂಕಿಅಂಶಗಳು:
- ಮೆಹಿದಿ ಹಸನ್ (ಬಾಂಗ್ಲಾದೇಶ): 4-1-11-4 vs ಶ್ರೀಲಂಕಾ, ಜುಲೈ 2025
- ಹರ್ಭಜನ್ ಸಿಂಗ್ (ಭಾರತ): 4-2-12-4 vs ಇಂಗ್ಲೆಂಡ್, ಸೆಪ್ಟೆಂಬರ್ 2012
- ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ): 4-0-16-4 vs ಶ್ರೀಲಂಕಾ, ಜೂನ್ 2022
- ಜೋ ಡೆನ್ಲಿ (ಇಂಗ್ಲೆಂಡ್): 4-0-19-4 vs ಶ್ರೀಲಂಕಾ, ಅಕ್ಟೋಬರ್ 2018
- ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾದೇಶ): 3-0-21-4 vs ಶ್ರೀಲಂಕಾ, ಏಪ್ರಿಲ್ 2017
ಮೆಹಿದಿ ಹಸನ್ ದಾಳಿಗೆ ಶ್ರೀಲಂಕಾ ತತ್ತರ
ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೆಹಿದಿ ಹಸನ್ ಮಿರಾಜ್ ಬದಲಿಗೆ ಕಣಕ್ಕಿಳಿದಿದ್ದ ಮೆಹಿದಿ, ಮೊದಲ ಓವರ್‌ನಿಂದಲೇ ವಿಕೆಟ್ ಬೇಟೆಗೆ ಇಳಿದರು. ತಮ್ಮ ಮೊದಲ ಓವರ್‌ನಲ್ಲಿ ಅಪಾಯಕಾರಿ ಕುಶಾಲ್ ಪೆರೆರಾ ವಿಕೆಟ್ ಪಡೆದರು. ನಂತರ ಐದನೇ ಓವರ್‌ನಲ್ಲಿ ದಿನೇಶ್ ಚಂಡಿಮಲ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಕೊನೆಯ ಓವರ್‌ನಲ್ಲಿ ಚರಿತ್ ಅಸಲಂಕಾ ಅವರ ವಿಕೆಟ್ ಪಡೆದು ಶ್ರೀಲಂಕಾ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
ಮೆಹಿದಿ ಅವರ ಈ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಬಾಂಗ್ಲಾದೇಶವು ಶ್ರೀಲಂಕಾ ತಂಡವನ್ನು ಪವರ್‌ಪ್ಲೇನಲ್ಲಿ ಕೇವಲ 40 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಳ್ಳುವಂತೆ ಮಾಡಿತ್ತು. ಮೆಹಿದಿ ಹಸನ್ ಪುರುಷರ T20I ಕ್ರಿಕೆಟ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಐದನೇ ಬಾಂಗ್ಲಾದೇಶದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಶಕೀಬ್ ಅಲ್ ಹಸನ್, ಮುಸ್ತಫಿಜುರ್ ರೆಹಮಾನ್, ಟಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ ಈ ಸಾಧನೆ ಮಾಡಿದ ಇತರೆ ಬಾಂಗ್ಲಾದೇಶದ ಬೌಲರ್‌ಗಳಾಗಿದ್ದಾರೆ. ಮೆಹಿದಿ ಟೈಗರ್ಸ್ ಪರ 10 ಏಕದಿನ ಪಂದ್ಯಗಳನ್ನೂ ಆಡಿದ್ದು, 4.95 ರ ಎಕಾನಮಿ ದರದಲ್ಲಿ 14 ವಿಕೆಟ್ ಪಡೆದಿದ್ದಾರೆ.