ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ನ ಪ್ರಥಮ ಇನಿಂಗ್ಸ್ ನಲ್ಲಿ ಬಾಂಗ್ಲಾದೇಶ ತಂಡ ಭಾರೀ ಮೊತ್ತ ಪೇರಿಸಿದೆ.
ಬಾಂಗ್ಲಾದೇಶ ತಂಡ 565 ರನ್ ಗಳಿಸಿದೆ. ಟಾಸ್ ಗೆದ್ದ ಬಾಂಗ್ಲಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಪ್ರಥಮ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ಪರ ಸೌದ್ ಶಕೀಲ್ (141) ಹಾಗೂ ಮೊಹಮ್ಮದ್ ರಿಝ್ವಾನ್ (171) ರನ್ ಗಳಿಸಿದ್ದರು. ಇಬ್ಬರು ಬ್ಯಾಟರ್ ಗಳ ಭರ್ಜರಿ ಶತಕಗಳೊಂದಿಗೆ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿದ ಪಾಕಿಸ್ತಾನ್ ತಂಡವು ಡಿಕ್ಲೇರ್ ಮಾಡಿಕೊಂಡಿತ್ತು.
ಈ ಬೃಹತ್ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾಗೆ ಶಾದ್ ಮನ್ ಇಸ್ಲಾಂ (93) ರನ್ ಗಳಿಸಿ ಉತ್ತಮ ಆರಂಭ ನೀಡಿದರು. ನಂತರ ಬಂದ ಮೊಮಿನುಲ್ ಹಕ್ 50 ರನ್ ಗಳಿಸಿ ಔಟ್ ಆದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ ಮುಶ್ಫಿಕುರ್ ರಹೀಮ್ ಉತ್ತಮ ಆಟ ಪ್ರದರ್ಶಿಸಿ 341 ಎಸೆತ ಎದುರಿಸಿ, 1 ಸಿಕ್ಸ್ ಹಾಗೂ 22 ಫೋರ್ಗಳೊಂದಿಗೆ 191 ರನ್ ಗಳಿಸಿದರು. ಲಿಟ್ಟನ್ ದಾಸ್ 56 ರನ್, ಮೆಹಿದಿ ಹಸನ್ ಮಿರಾಝ್ 77 ಗಳಿಸಿದರು. ಹೀಗಾಗಿ ಬಾಂಗ್ಲಾ ತಂಡ 565 ರನ್ ಗಳಿಸಿ ಆಲೌಟ್ ಆಯಿತು. ಇದು ಪಾಕಿಸ್ತಾನ್ ವಿರುದ್ಧ ಬಾಂಗ್ಲಾ ತಂಡವು ಟೆಸ್ಟ್ ನಲ್ಲಿ ಪೇರಿಸಿದ ಅತ್ಯಧಿಕ ರನ್ ಆಗಿದೆ.
117 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ್ ತಂಡವು 4ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 23 ರನ್ ಗಳಿಸಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ, ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಬಹುದು ಎನ್ನಲಾಗುತ್ತಿದೆ.