ಬೆಂಗಳೂರು: ಅಲ್-ಖೈದಾ ಜೊತೆ ನಂಟು ಹೊಂದಿದ್ದ ಜಾರ್ಖಂಡ್ ಮೂಲದ ಮಹಿಳೆಯನ್ನು ಗುಜರಾತ್ ಎಟಿಎಸ್ ಬೆಂಗಳೂರಿನಲ್ಲಿ ಬಂಧಿಸಿದೆ.
ಹೆಬ್ಬಾಳ ಸಮೀಪದ ಮನೋರಾಯನಪಾಳ್ಯದಲ್ಲಿ ನೆಲೆಸಿದ್ದ ಶಮಾ ಪರ್ವೀನ್ ಬಂಧಿತ ಮಹಿಳೆ.
ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಮೂಲವಾಧಿ ಸಂಘಟನೆಗಳ ಸಂಪರ್ಕ ಜಾಲಾಡಿದಾಗ ಪರ್ವೀನ್ ಬಗ್ಗೆ ಮಾಹಿತಿ ದೊರೆತಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ಎಟಿಎಸ್ ಆಕೆಯನ್ನು ಬಂಧಿಸಿ, ಆಕೆಯ ಮನೆಯಲ್ಲಿದ್ದ ಲ್ಯಾಪ್‌ಟಾಪ್ ಸೇರಿ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬಂಧನದ ನಂತರ ಮಹಿಳೆಯನ್ನು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವರ್ಗಾವಣೆ ಪ್ರಮಾಣ ಪತ್ರ ಪಡೆದು ಗುಜರಾತ್‌ಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಅಲ್-ಖೈದಾ ಗ್ಯಾಂಗ್‌ವೊಂದನ್ನು ಗುಜರಾತ್ ಎಟಿಎಸ್ ಪತ್ತೆಹಚ್ಚಿತ್ತು. ಈ ಗ್ಯಾಂಗ್‌ನ ಸಂಪರ್ಕ ಜಾಲವನ್ನು ಹುಡುಕಾಡಿದಾಗ ಪರ್ವೀನ್ ಬಗ್ಗೆ ಮಾಹಿತಿ ದೊರೆತಿದೆ. ಬಳಿಕ ಆಕೆಯ ಮನೆಗೆ ದಾಳಿ ನಡೆಸಿ ಮಂಗಳವಾರ ಬಂಧಿಸಲಾಯಿತು. ಅಲ್-ಖೈದಾ ಜೊತೆ ಮಹಿಳೆ ನಂಟು ಹೊಂದಿರುವುದು ತನಿಖೆಯಲ್ಲಿ ಸಾಬೀತಾಗಿದೆ.