ನವದೆಹಲಿ: ಪಹಲ್ಗಾಮ್ ದಾಳಿ ಬಳಿಕ ಭಾರತದ ನಿರಂತರ ದಾಳಿಗೆ ತತ್ತರಿಸಿ ಹೋಗಿದ್ದ ಪಾಕಿಸ್ತಾನವು ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನವಿರಾಮ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಉಗ್ರ ಪೋಷಣೆಯ ರಾಷ್ಟ್ರಕ್ಕೆ ಹೊಸ ತಲೆನೋವು ಆರಂಭವಾಗಿದೆ. ಹೌದು, ಪಾಕಿಸ್ತಾನದ 51 ಪ್ರದೇಶಗಳಲ್ಲಿ ಸುಮಾರು 71 ದಾಳಿ ಮಾಡಲಾಗಿದೆ ಎಂದು ಬಲೂಚಿಸ್ತಾನ ಲಿಬರೇಷನ್ ಆರ್ಮಿ (ಬಿಎಲ್ಎ) ತಿಳಿಸಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ನಾಗರಿಕ ದಂಗೆಯ ಭೀತಿ ಶುರುವಾಗಿದೆ.

“ಪಾಕಿಸ್ತಾನದ ಸೇನಾ ನೆಲೆಗಳು ಹಾಗೂ ಗುಪ್ತಚರ ಕಚೇರಿಗಳನ್ನು ಗುರಿಯಾಗಿಸಿ ಬಿಎಲ್ಎ ಸದಸ್ಯರು ದಾಳಿ ನಡೆಸಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ಬಿಎಲ್ಎ ಹೊರುತ್ತದೆ. ಬಿಎಲ್ಎ ಯಾವುದೇ ದೇಶದ ಆಣತಿಯಂತೆ ಕಾರ್ಯನಿರ್ವಹಿಸುವುದಿಲ್ಲ. ಸ್ವತಂತ್ರ ದೇಶಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಸೈನಿಕರ ಮೇಲೆ ಬಿಎಲ್ಎ ದಾಳಿ ನಡೆಸಿತ್ತು.
“ಬಿಎಲ್ಎ ಯಾವುದೇ ದೇಶದ ಕೈಗೊಂಬೆಯಾಗಲು ಬಯಸುವುದಿಲ್ಲ. ಸ್ವತಂತ್ರ ತೀರ್ಮಾನಗಳನ್ನು ತೆಗೆದುಕೊಳ್ಳಲು ನಾವು ಬದ್ಧರಾಗಿದ್ದೇವೆ. ಬಲೂಚಿಸ್ಥಾನದಲ್ಲಿ ನಮ್ಮೆಲ್ಲ ಹಕ್ಕುಗಳನ್ನು ಸ್ಥಾಪಿಸಲು, ಮಿಲಿಟರಿ, ರಾಜಕೀಯ ಪ್ರಾಬಲ್ಯವನ್ನು ಸಾಧಿಸಲು ನಮಗೆ ಎಲ್ಲ ರೀತಿಯ ಹಕ್ಕುಗಳು ಇವೆ. ಇದನ್ನು ಸ್ಥಾಪಿಸಲು ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಬಂಡುಕೋರರ ಗುಂಪು ಪ್ರಕಟಣೆ ತಿಳಿಸಿದೆ.
ಭಾರತ-ಪಾಕಿಸ್ತಾನದ ಕದನವಿರಾಮದ ಕುರಿತು ಪ್ರತಿಕ್ರಿಯಿಸಿರುವ ಬಿಎಲ್ಎ, “ಪಾಕಿಸ್ತಾನವು ಎಂದಿಗೂ ಉಗ್ರವಾದವನ್ನು ಪೋಷಣೆ ಮಾಡುತ್ತದೆ. ಕದನವಿರಾಮವು ಪಾಕಿಸ್ತಾನಕ್ಕೆ ಒಂದು ನೆಪ ಮಾತ್ರ. ಮುಂದೆಯೂ ಪಾಕಿಸ್ತಾನ ಭಯೋತ್ಪಾದನೆಗೆ ನೆರವು ನೀಡುತ್ತದೆ. ಪಾಕಿಸ್ತಾನವು ಶಾಂತಿಸ್ಥಾಪನೆಯ ಪ್ರತಿಯೊಂದು ಒಪ್ಪಂದವನ್ನು ಮುರಿದ ಕಾರಣಕ್ಕಾಗಿಯೇ ಪಾಕಿಸ್ತಾನದಲ್ಲಿ ರಕ್ತಪಾತ ಆಗುತ್ತಿದೆ” ಎಂದು ತಿಳಿಸಿದೆ.