ಈಗ ಮಕ್ಕಳ ಶಾಲಾ ಬ್ಯಾಗ್ ನ ತೂಕ ಹೆಚ್ಚಾಗಿದೆ. ಅಷ್ಟೇ ತೂಕದಷ್ಟು ಟೆನ್ಶನ್ ಕೂಡ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವರ್ಷದಲ್ಲಿ 10 ದಿನ 6, 7, 8ನೇ ತರಗತಿ ಮಕ್ಕಳಿಗೆ ‘ಬ್ಯಾಗ್ ರಹಿತ ಶಾಲಾ ದಿನ’ ಗಳನ್ನು ಜಾರಿಗೊಳಿಸುವ ಕುರಿತು ಶಾಲೆಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮಕ್ಕಳಲ್ಲಿನ ಮಾನಸಿಕ ಒತ್ತಡ ನಿವಾರಿಸುವ ಜತೆಗೆ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದ್ದೇಶದಿಂದ ಬ್ಯಾಗ್ ರಹಿತ ದಿನ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮಕ್ಕಳ ಉತ್ಸಾಹ, ಉಲ್ಲಾಸ ಕಾಪಾಡಿಕೊಳ್ಳುವ ಉದ್ದೇಶ ಈ ‘ಬ್ಯಾಗ್ ರಹಿತ ಶಾಲಾ ದಿನ’ದ ಹಿಂದಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.

ಮಕ್ಕಳಲ್ಲಿ ಶಿಕ್ಷಣದ ಜತೆಗೆ ಕೌಶಲ ಹೆಚ್ಚಿಸುವ ಮತ್ತು ಭವಿಷ್ಯದ ವೃತ್ತಿ ಬದುಕಿಗೆ ನೆರವಾಗುವ ಉದ್ದೇಶ, ಮರಗೆಲಸ, ವಿದ್ಯುತ್ ಕೆಲಸ, ಲೋಹದ ಕೆಲಸ, ತೋಟಗಾರಿಕೆ, ಕುಂಬಾರಿಕೆ ಸೇರಿದಂತೆ ವಿವಿಧ ವೃತ್ತಿಪರ ಕುಶಲ ಕಲೆಯ ಅಭ್ಯಾಸ, ಬ್ಯಾಗ್ ರಹಿತ ಅವಧಿಯಲ್ಲಿ ಬಡಗಿಗಳು, ತೋಟಗಾರಿಕೆಯಲ್ಲಿ ತೊಡಗಿರುವವರು, ಕುಂಬಾರರು ಮತ್ತಿತರ ಸ್ಥಳೀಯ ವೃತ್ತಿ ಪರರಿಂದ ವಿದ್ಯಾರ್ಥಿಗಳಿಗೆ ತರಬೇತಿ, ತರಕಾರಿ ಮಾರುಕಟ್ಟೆಗೆ ಭೇಟಿ, ಸಾಕು ಪ್ರಾಣಿಗಳ ಆರೈಕೆ ಕುರಿತು ಸಮೀಕ್ಷೆ ಮತ್ತು ವರದಿ ರಚನೆಯ ಕುರಿತು ಈ ಸಂದರ್ಭದಲ್ಲಿ ಮಕ್ಕಳಿಗೆ ಹೇಳಿಕೊಟ್ಟು ಮನಸ್ಸು ಉಲ್ಲಾಸಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಚಿತ್ರ ಬರಹ, ಗಾಳಿಪಟ ತಯಾರಿಸುವುದು ಮತ್ತು ಹಾರಿಸುವುದು. ಪುಸ್ತಕ ಮೇಳ ಆಯೋಜನೆ. ಆಲದ ಮರದ ಕೆಳಗೆ ಕುಳಿತು ಕೊಳ್ಳುವುದು, ಜೈವಿಕ ಅನಿಲ ಘಟಕ ಮತ್ತು ಸೌರ ಶಕ್ತಿ ಪಾರ್ಕ್ ಗಳಿಗೆ ಭೇಟಿ ನೀಡುವುದು ಸೇರಿದಂತೆ ಇನ್ನಿತರ ಚಟುವಟಿಕೆ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಶಾಲಾ ಅವಧಿಯ ಕನಿಷ್ಠ 10 ದಿನಗಳು ಅಥವಾ 60 ಗಂಟೆಗಳ ಶಾಲಾ ಸಮಯವನ್ನು ಇದಕ್ಕಾಗಿ ನಿಯೋಗಿಸಬೇಕೆಂದು ಸೂಚಿಸಲಾಗಿದೆ.