ಲಕ್ನೋ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದ್ದ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆ ನಾಳೆ (ಮಂಗಳವಾರ) ಧಾರ್ಮಿಕ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ.
ಮಂಗಳವಾರ ಮಧ್ಯಾಹ್ನ ಸುಮಾರು 11:52ರಿಂದ 12:35ರ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. 191 ಅಡಿ ಎತ್ತರದ ರಾಮ ಮಂದಿರದ ಮೇಲ್ಭಾಗದಲ್ಲಿ 11 ಅಡಿ ಅಗಲ ಮತ್ತು 22 ಅಡಿ ಉದ್ದದ ತ್ರಿಕೋನಾಕಾರದ ಕೇಸರಿ ಧ್ವಜವನ್ನು ಹಾರಿಸಲಾಗುತ್ತಿದೆ. ದ್ವಜದ ಮೇಲೆ ಸೂರ್ಯವಂಶಿ ಮತ್ತು ತ್ರೇತಾಯುಗದ ಚಿಹ್ನೆಗಳನ್ನು ಇರಿಸಲಾಗಿದೆ.

ಧ್ವಜದ ವಿಶೇಷತೆಗಳೇನು ಗೊತ್ತಾ?
- ರಾಮ ಮಂದಿರದ ಮೇಲೆ ಹಾರಲಿರುವ ಧ್ವಜ ತುಂಬಾ ವಿಶೇಷವಾಗಿದ್ದು, ದೈವಿಕ ಧ್ವಜವನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ತಯಾರಿಸಲಾಗಿದೆ.
- ಅಯೋಧ್ಯೆ ರಾಮ ಮಂದಿರದ ಧಾರ್ಮಿಕ ಧ್ವಜದಲ್ಲಿರುವ ಚಿಹ್ನೆಗಳಿಗೆ ಪ್ರತಿಯೊಂದಕ್ಕೂ ವಿಶೇಷ ಅರ್ಥವಿದೆ. ಕೇಸರಿ ಬಣ್ಣದ ಧ್ವಜ, ಸೂರ್ಯ ದೇವರು ಮತ್ತು ಓಂ ಚಿಹ್ನೆ ಹೊಂದಿದೆ.
- ಧಾರ್ಮಿಕ ಮಹತ್ವವುಳ್ಳ ವಿಶಿಷ್ಟವಾದ ಮರದ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಲಾಗಿದೆ. ಮೂರು ಪದರಗಳ ಬಟ್ಟೆಯಿಂದ ತಯಾರಿಸಲಾಗಿದ್ದು, ಇದರಲ್ಲಿ ಬಳಸಲಾದ ಪ್ರತಿಯೊಂದು ಅಂಶವೂ ಸ್ಥಳೀಯವಾಗಿದೆ.
- ಅಂಚುಗಳನ್ನು ಗೋಲ್ಡನ್ ರೇಷ್ಮೆಯಿಂದ ಮಾಡಲಾಗಿದ್ದು, ಎಲ್ಲಾ ಚಿಹ್ನೆಗಳು ಕೈಯಿಂದ ಮಾಡಲಾಗಿದೆ. ಅವೆಲ್ಲವನ್ನೂ ಕೈಯಿಂದ ರಚಿಸಲು 7-8 ದಿನಗಳು ಬೇಕಾಯಿತು.
ನಾಳೆ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಭಾರತದ ವಿವಿಧೆಡೆಯ ಆರು ಸಾವಿರ ಪ್ರಮುಖ ಗಣ್ಯರು ಭಾಗವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಭಾರಿ ಸಿದ್ದತೆ ನಡೆದಿದೆ.
ಇನ್ನು ಧ್ವಜಾರೋಹಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಗಣ್ಯ ವ್ಯಕ್ತಿಗಳು ಭಾಗಿಯಾಗುತ್ತಿರುವ ಹಿನ್ನೆಲೆ ದೇವಸ್ಥಾನಕ್ಕೆ ಭಕ್ತರ ದರ್ಶನಕ್ಕೆ ನಿರ್ಬಂಧಿಸಿದೆ. ಭದ್ರತೆಯ ದೃಷ್ಠಿಯಿಂದ ಇಂದಿನಿಂದ ಬುಧವಾರದವರೆಗೂ ದರ್ಶನಕ್ಕೆ ನಿರ್ಬಂಧ ವಿಧಿಸಿದೆ. ಇನ್ನು ಇಡೀ ಅಯೋಧ್ಯೆಯನ್ನು ಮಧುವಣಗಿತ್ತಿಯಂತೆ ಸಿದ್ಧಗೊಳಿಸಿದ್ದು, ಎಲ್ಲೆಡೆ ಭದ್ರತೆ ಹೆಚ್ಚುಗೊಳಿಸಿದೆ.
ಇದನ್ನೂ ಓದಿ : DCM ಡಿಕೆಶಿ ಸಿಎಂ ಆಗಲೆಂದು ಆಶೀರ್ವದಿಸಿದ ನಾಗ ಸಾಧುಗಳು


















