ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತ ದಾಖಲಿಸಿದೆ.
ಆಸ್ಟ್ರೇಲಿಯಾ ತಂಡ 474 ರನ್ ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಇಂದು ಎರಡನೇ ದಿನದಾಟ ಮುಂದುವರೆಸಿತ್ತು. ಮೊದಲ ದಿನದಾಟದಂತ್ಯಕ್ಕೆ 68 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಸ್ಮಿತ್ ಎರಡನೇ ದಿನದಾಟದಲ್ಲಿ ಅಮೋಘ ಶತಕ ಸಿಡಿಸಿದರೆ, 8 ರನ್ ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದ ನಾಯಕ ಪ್ಯಾಟ್ ಕಮಿನ್ಸ್ 49 ರನ್ ಗಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಮೊದಲ ಮೂವರು ಆಟಗಾರರು ಅರ್ಧಶತಕ ಗಳಿಸಿದರು. ಇದರ ನಂತರ ಸ್ಟೀವ್ ಸ್ಮಿತ್ ತಮ್ಮ ಟೆಸ್ಟ್ ವೃತ್ತಿಜೀವನದ 34 ನೇ ಶತಕ ಬಾರಿಸಿದರು.
ಆಸೀಸ್ ಪರ ಗರಿಷ್ಠ ಇನ್ನಿಂಗ್ಸ್ ಆಡಿದ ಸ್ಟೀವ್ ಸ್ಮಿತ್ 140 ರನ್ ಗಳಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ ಗರಿಷ್ಠ ನಾಲ್ಕು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದರು. ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ಸುಂದರ್ ಒಂದು ವಿಕೆಟ್ ಪಡೆದು ಮಿಂಚಿದರು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತದ ಪರ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದು, ರೋಹಿತ್ ಶರ್ಮಾ ಮತ್ತೆ ವಿಫಲತೆ ಅನುಭವಿಸಿದ್ದಾರೆ.