ಮಹಿಳಾ ಟಿ20 ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ತಂಡ ಫೈನಲ್ ಪ್ರವೇಶಿಸಿದೆ.
ಮಹಿಳಾ ಟಿ20 ವಿಶ್ವಕಪ್ನ ಮೊದಲ ಸೆಮಿ ಫೈನಲ್ ನಲ್ಲಿ ಬಲಿಷ್ಠ ಆಸೀಸ್ ಪಡೆಯನ್ನು 8 ವಿಕೆಟ್ ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶ ಮಾಡಿದೆ. ಆಫ್ರಿಕಾ ಪರ ಬ್ಯಾಟಿಂಗ್ ನಲ್ಲಿ ಅನ್ನೆಕೆ ಬಾಷ್ ಸಿಡಿಲಬ್ಬರದ ಅರ್ಧಶತಕ ಸಿಡಿಸಿದರೆ, ನಾಯಕಿ ಲಾರಾ ವೊಲ್ವಾರ್ಡ್ಟ್ ಕೂಡ 42 ರನ್ ಗಳಿಸಿದರು. ಟೂರ್ನಿಯಲ್ಲಿ ಅಜೇಯ ತಂಡವಾಗಿ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದ್ದ ಆಸ್ಟ್ರೇಲಿಯಾ ತಂಡ 2009 ರ ನಂತರ ಇದೇ ಮೊದಲ ಬಾರಿಗೆ ಫೈನಲ್ ಸುತ್ತಿನಿಂದ ಹೊರಗೆ ಬಿದ್ದಿದೆ.
ಇಲ್ಲಿಯವರೆಗೆ ನಡೆದಿರುವ 8 ಆವೃತ್ತಿಗಳ 7 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶ ಮಾಡಿತ್ತು. ಆದರೆ, ಬಾರಿ ಸೆಮಿಫೈನಲ್ ನಲ್ಲಿ ಮುಗ್ಗರಿಸಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿತ್ತು. ತಂಡದ ಪರ ಬೆತ್ ಮೂನಿ 44 ರನ್ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಆಲ್ ರೌಂಡರ್ ಎಲ್ಲಿಸ್ ಪೆರ್ರಿ 31 ರನ್ ಗಳಿಸಿದರು. ನಾಯಕಿ ಮೆಕ್ ಗ್ರಾತ್ 27 ರನ್ ಗಳ ಇನ್ನಿಂಗ್ಸ್ ಆಡಿದರು. ಆಫ್ರಿಕಾ ಬೌಲರ್ ಗಳ ಕರಾರುವಕ್ಕಾದ ದಾಳಿಗೆ ಆಸೀಸ್ ತಂಡದ ಯಾವ ಬ್ಯಾಟರ್ ಗೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ತಂಡ ಕೇವಲ 5 ವಿಕೆಟ್ ಕಳೆದುಕೊಂಡರೂ ಬೃಹತ್ ಮೊತ್ತ ಕಲೆಹಾಕುವಲ್ಲಿ ಎಡವಿತು.
134 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ವಿಕೆಟ್ ಗೆ 25 ರನ್ ಗಳ ಜೊತೆಯಾಟ ಸಿಕ್ಕಿತು. ನಂತರ ನಾಯಕಿ ಲಾರಾ ವೊಲ್ವಾರ್ಡ್ಟ್ ಹಾಗೂ ಅನ್ನೆಕೆ ಬಾಷ್ 96 ರನ್ ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು.
ಲಾರಾ 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 42 ರನ್ ಗಳಿಸಿದರೆ, 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 74 ರನ್ ಗಳಿಸಿದರು. ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡ ನಾಳೆ ನಡೆಯಲಿರುವ ಎರಡನೇ ಸೆಮಿಫೈನಲ್ ನಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ.