ನವದೆಹಲಿ: ಮದ್ಯದ ಹಗರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈಗ ಆ ಸ್ಥಾನಕ್ಕೆ ಅತಿಶಿ ಆಯ್ಕೆಯಾಗಿದ್ದಾರೆ. ಸೆ. 17ರಂದು ನಡೆದ ಆಮ್ ಆದ್ಮಿ ಪಾರ್ಟಿಯ (ಆಪ್) ಶಾಸಕಾಂಗ ಪಕ್ಷದ ಸಭೆಯಲ್ಲಿ ಅತಿಶಿ ಅವರನ್ನು ಶಾಸಕಾಂಗ ಪಕ್ಷದ ನೂತನ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಹೀಗಾಗಿ ದೆಹಲಿಯಲ್ಲಿ ಇನ್ನು ಮುಂದೆ ಅತಿಶಿ ದರ್ಬಾರ್ ನಡೆಯಲಿದೆ.
1981ರ ಜೂನ್ 8ರಂದು, ದೆಹಲಿಯ ಪಂಜಾಬಿ ಮೂಲದ ಕುಟುಂಬದಲ್ಲಿ ಜನಿಸಿದ್ದ ಅತಿಶಿಯವರ ಪೂರ್ಣ ಹೆಸರು ಅತಿಶಿ ಮರ್ಲೆನಾ ಸಿಂಗ್. ಇವರು ಬಿಎ ಪದವಿ ಪಡೆದಿದ್ದಾರೆ. ಆನಂತರದ ಎಂಎ ಪದವಿಯನ್ನು ಪ್ರತಿಷ್ಠಿತ ಆಕ್ಸ್ ಫರ್ಡ್ ವಿವಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಅವರ ಪತಿಯ ಹೆಸರು ಪ್ರವೀಣ್ ಸಿಂಗ್.
ಅವರ ಹೆಸರಿನ ಮುಂದೆ ಸಿಂಗ್ ಎಂಬ ಹೆಸರು ಬಂದಿದೆ. ಆದರೆ, ಅವರು ಜನರು ತಮ್ಮ ಹೆಸರಿನಿಂದ ಮಾತ್ರ ತಮ್ಮನ್ನು ಗುರುತಿಸಬೇಕು ಎಂದು ಬಯಸಿ, ತಮ್ಮ ಹೆಸರಿನ ಮುಂದಿದ್ದ ಮರ್ಲೆನಾ ಹಾಗೂ ಸಿಂಗ್ ಎಂಬ ಪದಗಳನ್ನು ಕೈಬಿಟ್ಟು, ಸಚಿವ ಸಂಪುಟದಲ್ಲಿ ಹಾಗೂ ಇತರ ಸರ್ಕಾರಿ ಕಡತಗಳಲ್ಲಿ ತಮ್ಮ ಹೆಸರನ್ನು ಅತಿಶಿ ಎಂದಷ್ಟೇ ಬಳಸುವಂತೆ ಸೂಚಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಅವರು ದೆಹಲಿಯ ಪೂರ್ವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆನಂತರ, 2020ರಲ್ಲಿ ಅವರು ದೆಹಲಿಯ ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2022ರಲ್ಲಿ ಅವರನ್ನು ಆಗಿನ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಲಹೆಗಾರ್ತಿಯಾಗಿ ನೇಮಿಸಲಾಗಿತ್ತು. ದೆಹಲಿಯ ಲೆಫ್ಟನೆಂಟ್ ಗವರ್ನರ್ ಅವರು ನೇಮಕಾತಿಯನ್ನು ರದ್ದುಗೊಳಿಸಿದರು.
2022 ಹಾಗೂ 2023ರಲ್ಲಿ ದೆಹಲಿ ಸರ್ಕಾರದಲ್ಲಿ ಮಹತ್ವದ ಘಟನೆಗಳು ಜರುಗಿದವು. ಮನೀಶ್ ಸಿಸೋಡಿಯಾ ಹಾಗೂ ಆಗಿನ ಸತ್ಯೇಂದರ್ ಜೈನ್ ಅವರು ರಾಜೀನಾಮೆಯಿಂದ ಕೆಲವು ಸಚಿವ ಸ್ಥಾನಗಳು ತೆರವಾಗಿದ್ದರಿಂದ ತಮ್ಮ ಪ್ರತಿಭೆಯಿಂದ ಜನಮನ್ನಣೆ ಗಳಿಸಿದ್ದ ಅತಿಶಿ ಸಂಪುಟ ಸೇರಿಸಿಕೊಂಡರು. ಮೊದಲ ಬಾರಿಗೆ ಆಯ್ಕೆಯಾಗಿ ಸಚಿವೆಯಾದರೂ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಂಸ್ಕೃತಿ, ಪ್ರವಾಸ ಹಾಗೂ ಲೋಕೋಪಯೋಗಿ ಇಲಾಖೆಗಳನ್ನು ದಕ್ಷವಾಗಿ ನಿಭಾಯಿಸಿದರು. ಸಚಿವಾಲಯಗಳನ್ನು ನಿರ್ವಹಿಸಿದ ಅನುಭವ ಇಲ್ಲದಿದ್ದರೂ ಈ ಎಲ್ಲಾ ಇಲಾಖೆಗಳನ್ನು ಏಕಕಾಲದಲ್ಲಿ ಸಮರ್ಪಕವಾಗಿ ಮುನ್ನಡೆಸಿದ ಹೆಗ್ಗಳಿಕೆ ಅವರದ್ದಾಗಿತ್ತು.
ಆನಂತರ ಮತ್ತಷ್ಟು ದೊಡ್ಡ ನಾಯಕಿಯಾಗಿ ಬೆಳೆದು ನಿಂತರು. ಈಗ ಸಿಎಂ ಆಗಿ ಅಧಿಕಾರ ಅನುಭವಿಸಲು ಉತ್ಸುಕರಾಗಿದ್ದಾರೆ.
ಅತಿಶಿ ಅವರು 1.41 ಕೋಟಿ ರೂ. ಮೌಲ್ಯದ ಆಸ್ತಿ ಒಡತಿಯಾಗಿದ್ದಾರೆ. ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ಮೌಲ್ಯವನ್ನು 1,20, 12, 824 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಅವರು 50 ಸಾವಿರ ರೂ. ನಗದು, ಅವರ ಪತಿಯ ಹೆಸರಿನಲ್ಲಿ 15 ಸಾವಿರ ರೂ. ನಗದು ಇದ್ದು ಒಟ್ಟು ನಗದು 65 ಸಾವಿರ ರೂ. ಎಂಬುವುದಾಗಿ ಚುನಾವಣೆ ವೇಳೆ ಘೋಷಿಸಿಕೊಂಡಿದ್ದರು.
ಬ್ಯಾಂಕ್ ಗಳಲ್ಲಿ, ಇತರ ಹಣಕಾಸು ಸಂಸ್ಥೆಗಳಲ್ಲಿ, ಬ್ಯಾಂಕ್ ಅಲ್ಲದ ಹಣಕಾಸು ಸಂಸ್ಥೆಗಳಲ್ಲಿ 1 ಕೋಟಿ 87 ಸಾವಿರದ 323 ರೂ. ಹಣವನ್ನು (1,00,88,323 ರೂ.) ಹೂಡಿಕೆ ಮಾಡಿದ್ದಾರೆ. ಎನ್ ಎಸ್ ಎಸ್, ಅಂಚೆ ಕಚೇರಿಯಲ್ಲಿ ಯೋಜನೆಗಳು ಹಾಗೂ ಇತರ ಯೋಜನೆಗಳಲ್ಲಿ 18 ಲಕ್ಷದ 60 ಸಾವಿರದ 500 ರೂ. ಹೂಡಿಕೆ ಮಾಡಿದ್ದು, ಎಲ್ಐಸಿಯಲ್ಲಿ ಹಾಗೂ ಇತರ ವಿಮೆಗಳ ಮೊತ್ತ 5 ಲಕ್ಷ ರೂ. ಆಗಿದೆ ಎಂದು ಅಫಿಡವಿಟ್ ನಲ್ಲಿ ಸಲ್ಲಿಸಿದ್ದರು.