ಬೆಂಗಳೂರು : 60 ವರ್ಷದ ಬಳಿಕ ನಿವೃತ್ತಿ ಜೀವನ ಸಾಗಿಸಲು ಹಣ ಬೇಕು. ಅದರಲ್ಲೂ, ಅಸಂಘಟಿತ ವಲಯದ ಕಾರ್ಮಿಕರು, ಜನಸಾಮಾನ್ಯರಿಗೆ ಪೆನ್ಶನ್ ಬರುವುದಿಲ್ಲ. ಆದರೆ, ಕಾರ್ಮಿಕರು ಹಾಗೂ ಜನಸಾಮಾನ್ಯರು 60 ವರ್ಷದ ಬಳಿಕ ನೆಮ್ಮದಿಯ ನಿವೃತ್ತಿ ಜೀವನ ಸಾಗಿಸಲಿ ಎಂದೇ ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು (Atal Pension Yojana) ಜಾರಿಗೊಳಿಸಿದೆ. ಇದಕ್ಕೆ ನೀವು ಪ್ರತಿ ದಿನ 7 ರೂಪಾಯಿ ಅಥವಾ ತಿಂಗಳಿಗೆ 210 ರೂಪಾಯಿ ಪ್ರೀಮಿಯಂ ಕಟ್ಟಿದರೂ ಸಾಕು, ನಿಮಗೆ 60 ವರ್ಷ ತುಂಬಿದ ಬಳಿಕ ತಿಂಗಳಿಗೆ 1 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿವರೆಗೆ ಪಿಂಚಣಿ ನೀಡಲಾಗುತ್ತದೆ.
ಕನಿಷ್ಠ 18 ವರ್ಷದಿಂದ 40 ವರ್ಷದೊಳಗಿನವರು ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 1 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿವರೆಗೆ ಪಿಂಚಣಿಯ ಆಯ್ಕೆಗಳು ಇರುತ್ತವೆ. ನೀವು ಯಾವ ಮೊತ್ತವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ, ಅದಕ್ಕೆ ಪ್ರೀಮಿಯಂ ಕಟ್ಟಬೇಕು. ಆದಾಯ ತೆರಿಗೆ ಪಾವತಿಸುವವರು, ಪಿಎಫ್ ಖಾತೆ ಹೊಂದಿರುವ ಸಂಘಟಿತ ನೌಕರರು ಯೋಜನೆಗೆ ಅರ್ಹರಲ್ಲ. ಖಾತೆದಾರರು ನಿಧನ ಹೊಂದಿದರೆ ಅವರ ಪತ್ನಿಗೆ ಪಿಂಚಣಿ ನೀಡಲಾಗುತ್ತದೆ. ಅವಧಿಗೂ ಮುನ್ನ ಅವರು ನಿಧನರಾದರೆ, ಹೂಡಿಕೆ ಮಾಡಿದ ಹಣವನ್ನು ನಾಮಿನಿಗೆ ನೀಡಲಾಗುತ್ತದೆ.
ನೀವು ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಗೆ ತೆರಳಿ ಅಟಲ್ ಪೆನ್ಶನ್ ಯೋಜನೆಯ ಫಾರ್ಮ್ ಭರ್ತಿ ಮಾಡಬೇಕು. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ವಿಳಾಸ, ಬಯಸಿದ ಪಿಂಚಣಿ ಸೇರಿ ಹಲವು ವಿವರ ಭರ್ತಿ ಮಾಡಬೇಕು. ಕೆವೈಸಿ ಫಾರ್ಮ್ ಭರ್ತಿ ಮಾಡುವ ಜತೆಗೆ ಆಧಾರ್ ಮಾಹಿತಿ ಒದಗಿಸಿ. ಪ್ರತಿ ತಿಂಗಳು ಪ್ರೀಮಿಯಂ ಕಡಿತಕ್ಕಾಗಿ ಆಟೋ ಡೆಬಿಟ್ ಆಯ್ಕೆ ಮಾಡಿಕೊಳ್ಳಬಹುದು.
ಇದಾದ ಬಳಿಕ ನೀವು 60 ವರ್ಷ ವಯಸ್ಸಿನವರೆಗೆ ನಿಯಮಿತವಾಗಿ ಪ್ರೀಮಿಯಂಗಳನ್ನು ಪಾವತಿಸುವ ಮೂಲಕ ನಿಮ್ಮ ವೃದ್ಧಾಪ್ಯವನ್ನು ಸುರಕ್ಷಿತಗೊಳಿಸಬಹುದು. ನೀವು 60 ವರ್ಷಕ್ಕಿಂತ ಮೊದಲು ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದರೆ, ನೀವು ಕೊಡುಗೆ ನೀಡಿದ ಹಣ ಮತ್ತು ಅದರ ಮೇಲೆ ಗಳಿಸಿದ ಬಡ್ಡಿಯನ್ನು ಮಾತ್ರ ಹಿಂತಿರುಗಿಸಲಾಗುತ್ತದೆ. ಸರ್ಕಾರದ ಪಾಲನ್ನು ನೀಡುವುದಿಲ್ಲ.
ಇದನ್ನೂ ಓದಿ : ಸೈನಿಕ ಶಾಲೆಯಲ್ಲಿ ಶಿಕ್ಷಕರ ಹುದ್ದೆಗಳ ನೇಮಕ | ಬಿ.ಎಡ್, ಬಿಪಿಎಡ್ ಮುಗಿಸಿದವರಿಗೆ ಗುಡ್ ನ್ಯೂಸ್



















