ಕಾರವಾರ : ಸಿದ್ದಾಪುರದ ವಸಂತ್ ನಾಯ್ಕ್ ಕೊಲೆ ಪ್ರಕರಣದ ಮೂರನೇ ಆರೋಪಿಯಾಗಿ ಜೈಲು ಸೇರಿರುವ ಜ್ಯೋತಿಷಿ ಕಮಲಾಕರ್ ಭಟ್‌ಗೆ ಈಗ ಪೋಕ್ಸೋ ಪ್ರಕರಣದ ಸಂಕಷ್ಟ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಪೋಕ್ಸೋ ನ್ಯಾಯಾಲಯವು ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಈ ಮೊದಲು ಜ್ಯೋತಿಷಿ ಕಮಲಾಕರ್ ಭಟ್ ವಿರುದ್ದ ಪೋಕ್ಸ್ ಪ್ರಕರಣ ದಾಖಲಾಗಿತ್ತು. ಆದರೆ, ಘಟನೆ ನಡೆದ ಸ್ಥಳದ ವ್ಯಾಪ್ತಿಯ ಆಧಾರದ ಮೇಲೆ ಪ್ರಕರಣವನ್ನು ಶಿವಮೊಗ್ಗದ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಇಂದು ಆರೋಪಿ ಕಮಲಾಕರ್ ಭಟ್‌ನನ್ನು ಕಾರವಾರ ಜೈಲಿನಿಂದ ಕರೆತಂದ ಪೊಲೀಸರು, ನಗರದ ಪೋಕ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್, ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ. ಮೆಡಿಕಲ್ ಟೆಸ್ಟ್ ಮುಗಿದ ನಂತರ ಪೊಲೀಸರು ಕಮಲಾಕರ್ ಭಟ್‌ನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಿದ್ದು, ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ.
ಇದನ್ನೂ ಓದಿ : ಇರಾನ್ ಸರ್ವೋಚ್ಚ ನಾಯಕನ ಮೌನಕ್ಕೆ ಕಾರಣವೇನು? ಕೋಮಾದಲ್ಲಿದ್ದಾರೆಯೇ ಮೊಜ್ತಬಾ ಖಮೇನಿ?



















