ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್ ಮಹಿಳಾ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಫೈನಲ್ ಪ್ರವೇಶಿಸಿದೆ.
ಈ ಪಂದ್ಯದಲ್ಲಿ ಬಾಂಗ್ಲಾವನ್ನು ಬರೋಬ್ಬರಿ 10 ವಿಕೆಟ್ ಗಳಿಂದ ಮಣಿಸಿ ಅಜೇಯ ತಂಡವಾಗಿ ಭಾರತ ಫೈನಲ್ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ಆಡಿದ ಎಲ್ಲ ಮೂರೂ ಪಂದ್ಯಗಳನ್ನು ಗೆದ್ದಿದ್ದ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಈಗ ಸೆಮಿಫೈನಲ್ ಪಂದ್ಯದಲ್ಲೂ ಬಾಂಗ್ಲಾ ತಂಡ ಮಣಿಸಿ ಸತತ ಐದನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.
ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಜುಲೈ 28 ರಂದು ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಅಜೇಯ ಭಾರತವನ್ನು ಎದುರಿಸಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊದಲ ಓವರ್ ನಲ್ಲಿ ಆಘಾತ ಎದುರಾಯಿತು. ರೇಣುಕಾಸಿಂಗ್ ಬಾಂಗ್ಲಾಗೆ ಶಾಕ್ ನೀಡಿದರು. ಓಪನರ್ ದಿಲಾರಾ ಅಖ್ತರ್ ವಿಕೆಟ್ ಉರುಳಿಸಿ ಭಾರತಕ್ಕೆ ಮೊದಲ ಯಶಸ್ಸು ನೀಡಿದರು. ತಮ್ಮ ಖೋಟಾದ ಎರಡನೇ ಓವರ್ನಲ್ಲೂ ವಿಕೆಟ್ ಭೇಟೆ ಮುಂದುವರೆಸಿದ ರೇಣುಕಾ ಮುರ್ಷಿದಾ ಖಾತೂನ್ ರನ್ನು ಪೆವಿಲಿಯನ್ಗಟ್ಟಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಇಶ್ಮಾ ತಂಜೀಮ್ ಕೂಡ 8 ರನ್ ಗಳಿಸಿ ರೇಣುಕಾಗೆ ಬಲಿಯಾದರು. ಹೀಗಾಗಿ ಬಾಂಗ್ಲಾ ತಂಡ ಕೇವಲ 23 ರನ್ ಗಳಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಳ್ಳುವಂತಾಯಿತು.
ಆ ನಂತರ ರಾಧಾ ಯಾದವ್ರ ಸ್ಪಿನ್ ಮೋಡಿಗೆ ಮಕಾಡೆ ಮಲಗಿತು. ರಾಧಾ ಕೂಡ ರೇಣುಕಾರಂತೆ ಪ್ರಮುಖ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಇನ್ನೊಂದೆಡೆ ನಾಯಕಿ ನಿಗರ್ ಸುಲ್ತಾನಾ ಅತ್ಯಧಿಕ 32 ರನ್ ದಾಖಲಿಸಿ, ತಂಡವನ್ನು 80 ರನ್ ಗಳ ಗಡಿಗೆ ತಂದರು.
80 ರನ್ ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಟಗಾರರು ಒಂದು ವಿಕೆಟ್ ಪಡೆಯುವ ಅವಕಾಶವನ್ನು ಬಾಂಗ್ಲಾ ಬೌಲರ್ ಗಳಿಗೆ ನೀಡಲಿಲ್ಲ. 11 ಓವರ್ ಗಳಲ್ಲಿ ಭಾರತ ತಂಡ ಗೆಲುವಿನ ದಡ ಮುಟ್ಟಿತು. ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಅಜೇಯ 83 ರನ್ ಗಳ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಮೃತಿ 39 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 55 ರನ್ ಗಳಿಸಿದರೆ, ಶಫಾಲಿ ವರ್ಮಾ 28 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 26 ರನ್ ಗಳಿಸಿದರು.