ಮುಂಬೈ: ಮುಂಬೈ ಇಂಡಿಯನ್ಸ್ (Mumbai Indians) ತಂಡ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿದೆ. ಐಪಿಎಲ್ನ 12ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ 16.2 ಓವರ್ಗಳಲ್ಲಿ ಕೇವಲ 116 ರನ್ ಗಳಿಸಿತ್ತು. ಮುಂಬೈ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುತ್ತಿರುವ ಯುವ ಎಡಗೈ ವೇಗಿ ಅಶ್ವನಿ ಕುಮಾರ್ (Ashwani Kumar) ಉತ್ತಮ ಪ್ರದರ್ಶನ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯವನ್ನಾಡುವ ಅವಕಾಶ ಪಡೆದ ಅಶ್ವನಿ ಕುಮಾರ್, ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದರು. ಮೊದಲ ಎಸೆತದಲ್ಲೇ ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡಿದರು. ಈ ವಿಕೆಟ್‌ನೊಂದಿಗೆ, ಅವರು ತಮ್ಮ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್‌ನ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಅಶ್ವನಿ ತಮ್ಮ ಎರಡನೇ ಓವರ್‌ನಲ್ಲಿ ಪ್ರಮುಖ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅಶ್ವನಿ ತಮ್ಮ ಎರಡನೇ ಓವರ್ನಲ್ಲಿ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಮತ್ತು ಮನೀಶ್ ಪಾಂಡೆ ಅವರನ್ನೂ ಬಲಿಪಶುಗಳನ್ನಾಗಿ ಮಾಡಿಕೊಂಡಿದ್ದಾರೆ. ಮೂರನೇ ಓವರ್ನಲ್ಲಿ ವಿಕೆಟ್ ಬೇಟೆ ನೆಡೆಸಿದ ಅಶ್ವನಿ, ಅಪಾಯಕಾರಿ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ರನ್ನು ಪೆವಿಲಿಯನ್ಗಟ್ಟಿದರು. ಈ ಮೂಲಕ 3 ಓವರ್ಗಳಲ್ಲಿ 24 ರನ್ ನೀಡಿ ಪ್ರಮುಖ 4 ವಿಕೆಟ್ ಉರುಳಿಸಿದರು.