ನವದೆಹಲಿ: ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಲಿನ ಕಹಿ ಅನುಭವಿಸಿರುವ ಟೀಮ್ ಇಂಡಿಯಾ, ಇದೀಗ ಗುವಾಹಟಿಯಲ್ಲಿ ನಡೆಯಲಿರುವ ನಿರ್ಣಾಯಕ ಎರಡನೇ ಟೆಸ್ಟ್‌ಗೆ ಸಜ್ಜಾಗುತ್ತಿದೆ. ಸರಣಿಯನ್ನು 1-1ರಲ್ಲಿ ಸಮಬಲ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿರುವ ಭಾರತಕ್ಕೆ, ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಗೆಲುವಿನ ಸೂತ್ರವೊಂದನ್ನು ಸೂಚಿಸಿದ್ದಾರೆ. ಗಾಯಾಳು ನಾಯಕ ಶುಭಮನ್ ಗಿಲ್ ಮತ್ತು ಆಲ್ ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ಇಬ್ಬರು ಯುವ ಆಟಗಾರರಿಗೆ ಮಣೆ ಹಾಕುವಂತೆ ಅವರು ಸಲಹೆ ನೀಡಿದ್ದಾರೆ.
ಗುವಾಹಟಿಯಲ್ಲಿ ಶನಿವಾರದಿಂದ ಆರಂಭವಾಗಲಿರುವ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ (Playing XI) ಎರಡು ಪ್ರಮುಖ ಬದಲಾವಣೆಗಳನ್ನು ಅಶ್ವಿನ್ ನಿರೀಕ್ಷಿಸುತ್ತಿದ್ದಾರೆ.
ಅಶ್ವಿನ್ ಲೆಕ್ಕಾಚಾರವೇನು?
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, “ನಾಯಕ ಶುಭಮನ್ ಗಿಲ್ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯೇ ಸರಿ. ಅವರ ಸ್ಥಾನವನ್ನು ತುಂಬಲು ತಮಿಳುನಾಡಿನ ಪ್ರತಿಭಾನ್ವಿತ ಬ್ಯಾಟರ್ ಸಾಯಿ ಸುದರ್ಶನ್ ಸೂಕ್ತ ಆಯ್ಕೆ. ಇನ್ನು ತಂಡದ ಬೌಲಿಂಗ್ ಸಂಯೋಜನೆಯಲ್ಲಿ ಸಮತೋಲನ ತರಲು ಅಕ್ಷರ್ ಪಟೇಲ್ ಬದಲಿಗೆ ಆಂಧ್ರದ ವೇಗದ ಬೌಲಿಂಗ್ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕಣಕ್ಕಿಳಿಯಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಮಾತಿಗೆ ಕಾರಣವನ್ನೂ ನೀಡಿರುವ ಅವರು, “ತಂಡದಲ್ಲಿ ಈಗಾಗಲೇ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ರೂಪದಲ್ಲಿ ಮೂರು ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಇವರ ಜೊತೆಗೆ ಅಕ್ಷರ್ ಪಟೇಲ್ ಅವರನ್ನೂ ಸೇರಿಸಿಕೊಂಡರೆ ಸ್ಪಿನ್ ಆಯ್ಕೆಗಳು ಹೆಚ್ಚಾಗಿ ಗೊಂದಲ ಮೂಡಬಹುದು. ಅದರ ಬದಲು ನಿತೀಶ್ ರೆಡ್ಡಿ ಅವರನ್ನು ಆಡಿಸಿದರೆ ವೇಗದ ಬೌಲಿಂಗ್ ವಿಭಾಗಕ್ಕೂ ಬಲ ಬರುತ್ತದೆ ಮತ್ತು ಬ್ಯಾಟಿಂಗ್ ಆಳವೂ ಹೆಚ್ಚುತ್ತದೆ,” ಎಂದು ವಿಶ್ಲೇಷಿಸಿದ್ದಾರೆ.
ಪಂತ್‌ಗೆ ಬೇಕಿದೆ ‘ಸೀನಿಯರ್ಸ್’ ಸಾಥ್
ಇದೇ ವೇಳೆ, ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಲಿರುವ ರಿಷಭ್ ಪಂತ್ ಅವರಿಗೆ ತಂಡದ ಹಿರಿಯ ಆಟಗಾರರ ಬೆಂಬಲ ಅತ್ಯಗತ್ಯ ಎಂದು ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಪ್ರತಿಪಾದಿಸಿದ್ದಾರೆ. “ದಕ್ಷಿಣ ಆಫ್ರಿಕಾ ಬಲಿಷ್ಠ ತಂಡವಾಗಿದ್ದು, ಸರಣಿ ಗೆಲ್ಲುವ ಹಠದಲ್ಲಿದೆ. ಇಂತಹ ಒತ್ತಡದ ಸಮಯದಲ್ಲಿ ನಾಯಕನಿಗೆ ಸಹ ಆಟಗಾರರು ಬೆನ್ನೆಲುಬಾಗಿ ನಿಲ್ಲಬೇಕು. ನಿರ್ದಿಷ್ಟ ಯೋಜನೆಗಳೊಂದಿಗೆ ಕಣಕ್ಕಿಳಿದರೆ ಮಾತ್ರ ಗೆಲುವು ಸಾಧ್ಯ,” ಎಂದು ರಹಾನೆ ಎಚ್ಚರಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ರೇಸ್‌ನಲ್ಲಿ ಉಳಿಯಲು ಟೀಮ್ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಹೀಗಾಗಿ ಅಶ್ವಿನ್ ಅವರ ಈ ‘ಮಾಸ್ಟರ್ ಪ್ಲಾನ್’ ಅನ್ನು ಟೀಮ್ ಮ್ಯಾನೇಜ್‌ಮೆಂಟ್ ಪರಿಗಣಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಒಡಿಐ, ಟಿ20 ಸರಣಿಗೆ ಹರಿಣಗಳ ತಂಡದ ಪ್ರಕಟ ; ಮಾರ್ಕ್ರಮ್ ಹೆಗಲಿಗೆ ಟಿ20 ಸಾರಥ್ಯ



















