ಹೈದರಾಬಾದ್: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj: ) ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆಯವರ ಮೊಮ್ಮಗಳು ಜನೈ ಭೋಸ್ಲೆ ಜತೆಯಾಗಿ ಕಾಣಿಸಿಕೊಂಡಿರುವ ಚಿತ್ರವೊಂದು ಭಾರೀ ಕೌತುಕ ಸೃಷ್ಟಿಸಿದೆ. ಈ ಚಿತ್ರವು ವೈರಲ್ ಆಗಿದ್ದು ಅವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆಯೇ ಎಂಬ ಮಟ್ಟಿಗೆ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಜನೈ ಭೋಸ್ಲೆ ತಮ್ಮ ಜನ್ಮದಿನವನ್ನುವಿಜೃಂಭಣೆಯಿಂದ ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ನಟ-ನಟಿಯರು ಹಾಗೂ ನಾನಾ ಕ್ಷೇತ್ರದ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಅಂತೆಯೇ ಕ್ರಿಕೆಟಿಗ ಸಿರಾಜ್ ಕೂಡ ಭಾಗವಹಿಸಿದ್ದರು. ಜನೈ ಅವರು ಸಿರಾಜ್ ಜತೆಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದು ಎಲ್ಲ ರೀತಿಯ ಗಾಸಿಪ್‌ಗಳಿಗೆ ಕಾರಣವಾಗಿದೆ.
ಸುದ್ದಿ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಸಿರಾಜ್ ಹಾಗೂ ಜನೈ ಇಬ್ಬರು ಅನವಶ್ಯಕ ಮಾತುಗಳಿಗೆ ಬ್ರೇಕ್ ಹಾಕಿದ್ದಾರೆ. ನಾವಿಬ್ಬರು ಅಣ್ಣ-ತಂಗಿ ಇದ್ದಂತೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸದ್ಯ, ಚಾಂಪಿಯನ್ ಟ್ರೋಫಿಯಿಂದ ಹೊರಗುಳಿದಿರುವ ಸಿರಾಜ್, ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
ಸಿರಾಜ್ ಪಂಜಾಬಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಮಾಹಿರಾ ಶರ್ಮಾ(Mahira Sharma) ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಬಂದಿತ್ತು. ಮಾಹಿರಾ ಶರ್ಮಾ ಅವರ ಎಲ್ಲ ಪೋಸ್ಟ್‌ಗಳಿಗೆ ಸಿರಾಜ್ ಲೈಕ್ಸ್ ಮಾಡುತ್ತಿದ್ದಾರೆ ಹೀಗಾಗಿ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಿರಾ ಬಿಗ್ ಬಾಸ್ 13 ರ ಸ್ಪರ್ಧಿಯಾಗಿದ್ದರು. ಸದ್ಯ ಅವರು ಪಂಜಾಬಿ ಚಿತ್ರಗಳಲ್ಲಿ ಮತ್ತು ಮ್ಯೂಸಿಕ್ ವೀಡಿಯೊಗಳನ್ನು ಮಾಡುತ್ತಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಸಿರಾಜ್ ಅವರನ್ನು 12.75 ಕೋಟಿ ರೂ.ಗಳಿಗೆ ಗುಜರಾತ್ ಟೈಟಾನ್ಸ್ ತಂಡ ಖರೀದಿ ಮಾಡಿದ್ದು ಅವರ ಮೌಲ್ಯ ಇನ್ನಷ್ಟು ಹೆಚ್ಚಾಗಿದೆ.