ನವದೆಹಲಿ: ಚೀನಾ ನಿರ್ಮಿಸುತ್ತಿರುವ ಯಾರ್ಲುಂಗ್ ತ್ಸಾಂಗ್ಪೋ ನದಿಯ (ಭಾರತದ ಬ್ರಹ್ಮಪುತ್ರ) ರಹಸ್ಯ ಮೆಗಾ-ಅಣೆಕಟ್ಟು ಯೋಜನೆ, ಭಾರತದ ಗಡಿಯಿಂದ ಕೇವಲ 50 ಕಿ.ಮೀ. ದೂರದಲ್ಲಿದ್ದು, ಇದನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು “ಟಿಕ್ಕಿಂಗ್ ಟೈಮ್ ಬಾಂಬ್” ಎಂದು ಬಣ್ಣಿಸಿದ್ದಾರೆ. ಈ ಅಣೆಕಟ್ಟು ಬೃಹತ್ ಜಲಾಶಯ ಸಾಮರ್ಥ್ಯವನ್ನು ಹೊಂದಿದ್ದು, ದತ್ತಾಂಶಗಳ ಬಗ್ಗೆ ಸಂಪೂರ್ಣ ಪಾರದರ್ಶಕತೆಯಿಲ್ಲ. ಇದು ಕೆಳಭಾಗದ ಪ್ರದೇಶಗಳಲ್ಲಿ ಪರಿಸರ, ಕಾರ್ಯತಂತ್ರ ಮತ್ತು ಮಾನವೀಯ ಅಪಾಯಗಳನ್ನು ಸೃಷ್ಟಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಟಿಬೆಟ್‌ನಲ್ಲಿ ಯಾರ್ಲುಂಗ್ ತ್ಸಾಂಗ್ಪೋ ನದಿಯ ಮೇಲೆ ನಿರ್ಮಾಣಗೊಳ್ಳಲಿರುವ ಈ ಅಣೆಕಟ್ಟು, ಜಲವಿದ್ಯುತ್ ಉತ್ಪಾದನೆಯಲ್ಲಿ ಚೀನಾದ ತ್ರೀ ಗೋರ್ಜಸ್ ಅಣೆಕಟ್ಟನ್ನೂ ಮೀರಿಸಲಿದೆ. ವರದಿಯ ಪ್ರಕಾರ, 137 ಶತಕೋಟಿ ಡಾಲರ್ ವೆಚ್ಚದ ಈ ಯೋಜನೆಯು 60,000 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಿದೆ. ಆದಾಗ್ಯೂ, ಈ ಬೃಹತ್ ಯೋಜನೆ ಸಂಪೂರ್ಣ ರಹಸ್ಯವಾಗಿ ಉಳಿದಿದೆ. ಇದು ಭಾರತ ಮತ್ತು ಬಾಂಗ್ಲಾದೇಶದ ಕೆಳಭಾಗದ ಸಮುದಾಯಗಳು ಮತ್ತು ಅವುಗಳ ಪರಿಸರ ವ್ಯವಸ್ಥೆಗಳ ಮೇಲೆ ಇದು ವಿನಾಶಕಾರಿ ಪರಿಣಾಮ ಬೀರಬಹುದು ಎಂದು ಪೆಮಾ ಖಂಡು ಎಚ್ಚರಿಸಿದ್ದಾರೆ.
2024ರಲ್ಲಿ ಮೆಡೋಗ್ ಕೌಂಟಿಯಲ್ಲಿ ಅಣೆಕಟ್ಟು ಅನುಮೋದನೆಯ ವರದಿಗಳ ಹೊರತಾಗಿಯೂ, ಬೀಜಿಂಗ್‌ನ ಪಾರದರ್ಶಕತೆಯ ಕೊರತೆಯು ಯೋಜನೆಯನ್ನು ಬಹುಪಾಲು ರಹಸ್ಯವಾಗಿರಿಸಿದೆ. ಇದು ಪ್ರಾದೇಶಿಕ ಉದ್ವಿಗ್ನತೆಗಳನ್ನೂ ಹೆಚ್ಚಿಸಿದೆ. ಈ ಅಣೆಕಟ್ಟು “ಅರುಣಾಚಲ ಪ್ರದೇಶದ ಅಸ್ತಿತ್ವಕ್ಕೂ ಬೆದರಿಕೆ”ಯಾಗಿದೆ. ಏಕೆಂದರೆ, ಹಠಾತ್ ನೀರು ಬಿಡುಗಡೆಯಾದರೆ ಸಿಯಾಂಗ್ ಮತ್ತು ಬ್ರಹ್ಮಪುತ್ರ ನದಿಗಳಲ್ಲಿ ಪ್ರವಾಹ ಉಂಟಾಗಬಹುದು, ಆದರೆ ಹರಿವನ್ನು ನಿರ್ಬಂಧಿಸಿದರೆ ನೀರಿನ ಲಭ್ಯತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಯೋಜನೆಯ ರಹಸ್ಯ ಸ್ವರೂಪ – ಅಂತರರಾಷ್ಟ್ರೀಯ ಜಲ ಒಪ್ಪಂದಗಳಿಗೆ ಸಹಿ ಹಾಕಲು ಚೀನಾ ನಿರಾಕರಿಸುವುದರೊಂದಿಗೆ – ಪರಿಸರ ಮತ್ತು ಭೌಗೋಳಿಕ ರಾಜಕೀಯ ಪರಿಣಾಮಗಳ ಬಗ್ಗೆ ಕಳವಳಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಅಣೆಕಟ್ಟಿನಿಂದ ಸಂಭಾವ್ಯ ಬೆದರಿಕೆಗಳು ಮತ್ತು ಆತಂಕಗಳಿದ್ದರೂ, ಕೆಲವು ತಜ್ಞರು ಚೀನಾ ಈ ನದಿಯನ್ನೇ ಅಸ್ತ್ರವಾಗಿ ಬಳಸಬಹುದೇ ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅದರ ಯೋಜನೆಗಳು ಹೆಚ್ಚಾಗಿ ‘ರನ್-ಆಫ್-ದಿ-ರಿವರ್’ ಸ್ವರೂಪದ್ದಾಗಿದ್ದು, ಕೆಳಭಾಗದ ಹರಿವನ್ನು ಗಣನೀಯವಾಗಿ ಬದಲಾಯಿಸುವ ಸಾಧ್ಯತೆಯಿಲ್ಲ. ಭಾರತವು ಪಾಕಿಸ್ತಾನದೊಂದಿಗೆ ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಈ ಕಳವಳಗಳು ಹೊರಬಿದ್ದಿವೆ.
ಮುಖ್ಯಮಂತ್ರಿ ಖಂಡು ಹೇಳಿದ್ದೇನು?
ಪಿಟಿಐ ಸುದ್ದಿ ಸಂಸ್ಥೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರು ಚೀನಾದ ಮೆಗಾ-ಅಣೆಕಟ್ಟನ್ನು ಗಂಭೀರ ಕಳವಳವೆಂದು ವಿವರಿಸಿದ್ದು, ಅದನ್ನು “ಜಲ ಬಾಂಬ್” ಮತ್ತು ಬೀಜಿಂಗ್‌ನ ಮಿಲಿಟರಿ ಅಪಾಯಗಳಿಗಿಂತಲೂ ಮೀರಿದ “ಅಸ್ತಿತ್ವದ ಬೆದರಿಕೆ” ಎಂದು ಕರೆದಿದ್ದಾರೆ. ಅರುಣಾಚಲ ಪ್ರದೇಶವು ಟಿಬೆಟ್‌ನೊಂದಿಗೆ 1,200 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆಯೇ ವಿನಹಾ ಚೀನಾದೊಂದಿಗೆ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಟಿಬೆಟ್ ಅನ್ನು ಚೀನಾ 1950 ರಲ್ಲಿ ಆಕ್ರಮಿಸಿಕೊಂಡಿದ್ದನ್ನು ಅವರು ಉಲ್ಲೇಖಿಸಿದ್ದಾರೆ.
“ಯಾರಿಗೆ ಗೊತ್ತು ಚೀನಾ ಏನು ಮಾಡಬಹುದು ಎಂದು? ಅಂತರರಾಷ್ಟ್ರೀಯ ಜಲ ಒಪ್ಪಂದಗಳಿಗೆ ಸಹಿ ಹಾಕದ ರಾಷ್ಟ್ರವಾಗಿರುವುದರಿಂದ, ಅದನ್ನು ಒಂದು ರೀತಿಯ ‘ಜಲ ಬಾಂಬ್’ ಆಗಿಯೂ ಬಳಸಬಹುದು” ಎಂದು ಖಂಡು ಹೇಳಿದ್ದಾರೆ.
ಅವರು ಮೆಡೋಗ್ ಅಣೆಕಟ್ಟು ಅರುಣಾಚಲ, ಅಸ್ಸಾಂ ಮತ್ತು ಬಾಂಗ್ಲಾದೇಶಕ್ಕೆ ನಿರ್ಣಾಯಕವಾಗಿರುವ ಸಿಯಾಂಗ್ ಮತ್ತು ಬ್ರಹ್ಮಪುತ್ರ ನದಿಗಳಿಗೆ ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ. ಚೀನಾದ ಈ ದುಸ್ಸಾಹಸದ ಸಂಭಾವ್ಯ ದುಷ್ಪರಿಣಾಮಗಳನ್ನು ನಿಗ್ರಹಿಸಲು ಮತ್ತು ಯಾವುದೇ ಅನಿರೀಕ್ಷಿತ ಪರಿಸ್ಥಿತಿಗೆ ಸನ್ನದ್ಧರಾಗಲು, ಅರುಣಾಚಲ ಪ್ರದೇಶವು ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದನ್ನು ರಕ್ಷಣಾ ಕಾರ್ಯವಿಧಾನವಾಗಿ ಸ್ಥಾಪಿಸಲು ಬಹುಉದ್ದೇಶಿತ ಸಿಯಾಂಗ್ ಮೇಲ್ದಂಡೆ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪಿಸಿದ್ದೇವೆ ಎಂದೂ ಖಂಡು ಬಹಿರಂಗಪಡಿಸಿದ್ದಾರೆ.
ಚೀನಾದ ‘ಜಲ ಬಾಂಬ್’ ಬಗ್ಗೆ ಭಾರತ ಆತಂಕಪಡಬೇಕೇ?
ಯಾರ್ಲುಂಗ್ ತ್ಸಾಂಗ್ಪೋ ನದಿಯು ಅರುಣಾಚಲಕ್ಕೆ ಸಿಯಾಂಗ್ ಆಗಿ ಹರಿಯುವ ಮಹಾ ತಿರುವಿನಲ್ಲೇ ಚೀನಾದ ಅಣೆಕಟ್ಟು ಇದೆ. ಇದು ನೀರಿನ ಹರಿವನ್ನು ಬದಲಾಯಿಸಿದರೆ, ಉದ್ದೇಶಪೂರ್ವಕವಾಗಿ ಅಥವಾ ಅನ್ಯಥಾ, ವಿನಾಶಕಾರಿ ಪ್ರವಾಹದ ಭೀತಿಯನ್ನು ಹುಟ್ಟುಹಾಕುತ್ತದೆ. ಚೀನಾ ಹಠಾತ್ತನೆ ನೀರನ್ನು ಬಿಡುಗಡೆ ಮಾಡಿದರೆ, “ನಮ್ಮ ಸಂಪೂರ್ಣ ಸಿಯಾಂಗ್ ಪಟ್ಟಿಯು ನಾಶವಾಗುತ್ತದೆ” ಎನ್ನುತ್ತಾರೆ ಖಂಡು. ಇದು ಆದಿ ಬುಡಕಟ್ಟು ಸಮುದಾಯ ಮತ್ತು ಇತರ ಸಮುದಾಯಗಳಿಗೆ ಅಪಾಯವನ್ನುಂಟುಮಾಡುವುದು ಖಚಿತ, ಅಲ್ಲದೇ ಆಸ್ತಿ, ಭೂಮಿ ಮತ್ತು ಮಾನವ ಜೀವಗಳಿಗೆ ವಿನಾಶಕಾರಿ ನಷ್ಟವನ್ನು ಉಂಟುಮಾಡಬಹುದು ಎಂದಿದ್ದಾರೆ.
ಚೀನಾ, ಮೇಲ್ಭಾಗದ ದೇಶವಾಗಿ, ಬ್ರಹ್ಮಪುತ್ರದಂತಹ ನದಿಗಳ ಹರಿವಿನ ಮೇಲೆ ಕಾರ್ಯತಂತ್ರದ ನಿಯಂತ್ರಣವನ್ನು ಹೊಂದಿದೆ. ಇದು ಏಕಪಕ್ಷೀಯವಾಗಿ ನೀರನ್ನು ತಿರುಗಿಸಲು ಅಥವಾ ಅಣೆಕಟ್ಟು ಕಟ್ಟಲು ಶಕ್ತಿಯನ್ನು ನೀಡುತ್ತದೆ, ಇದು ಭಾರತ ಮತ್ತು ಬಾಂಗ್ಲಾದೇಶದಂತಹ ಕೆಳಭಾಗದ ರಾಷ್ಟ್ರಗಳಿಗೆ ಗಂಭೀರ ಪರಿಸರ ಮತ್ತು ಭದ್ರತಾ ಬೆದರಿಕೆಗಳನ್ನು ಒಡ್ಡುತ್ತದೆ.
ಸಿಯಾಂಗ್ ಮತ್ತು ಬ್ರಹ್ಮಪುತ್ರದಲ್ಲಿ ನೀರಿನ ಹರಿವು ಕಡಿಮೆಯಾದರೆ ಭಾರತದ ಈಶಾನ್ಯ ಮತ್ತು ಬಾಂಗ್ಲಾದೇಶದಲ್ಲಿ ಕೃಷಿ, ಮೀನುಗಾರಿಕೆ ಮತ್ತು ಜೀವನೋಪಾಯಕ್ಕೆ ಅಡ್ಡಿಯಾಗಬಹುದು.
ಮೆಡೋಗ್ ಅಣೆಕಟ್ಟು ‘ರನ್-ಆಫ್-ದಿ-ರಿವರ್’ ಯೋಜನೆಯಾಗಿದ್ದರೂ, ಇದು ಗಣನೀಯ ಜಲಾಶಯವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ, ಅಂದರೆ ಇದು ಗಮನಾರ್ಹ ಪ್ರಮಾಣದ ನೀರನ್ನು ಸಂಗ್ರಹಿಸಬಹುದು ಮತ್ತು ಕೆಳಭಾಗದ ಹರಿವಿನ ಮೇಲೆ ಪರಿಣಾಮ ಬೀರಬಹುದು.
ಇದಲ್ಲದೆ, ಗಡಿ ದಾಟುವ ನದಿಗಳ ಸಮಾನ ಹಂಚಿಕೆ ಮತ್ತು ನಿರ್ವಹಣೆಯನ್ನು ನಿಯಂತ್ರಿಸುವ 1997ರ ವಿಶ್ವಂಸಸ್ಥೆಯ ಗಡಿರಹಿತ ಜಲಮಾರ್ಗಗಳ ಬಳಕೆ ಕುರಿತ ಸಮಾವೇಶಕ್ಕೆ ಸಹಿ ಹಾಕಲು ಚೀನಾದ ನಿರಾಕರಣೆಯು ಭಾರತಕ್ಕೆ ಮಾತ್ರವಲ್ಲದೆ ಪ್ರವಾಹ ಪೀಡಿತ ಬಾಂಗ್ಲಾದೇಶಕ್ಕೂ ಕಳವಳಕಾರಿಯಾಗಿದೆ.


















