2024ರ ವರ್ಷದ ಪುರುಷರ ಟಿ20 ಕ್ರಿಕೆಟಿಗನಾಗಿ ಕೊನೆಗೂ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಅರ್ಷದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗೆ ನಾಲ್ವರು ಆಟಗಾರರ ಹೆಸರು ಫೈನಲ್ ರೇಸ್ ನಲ್ಲಿತ್ತು. ಪ್ರಶಸ್ತಿ ಸುತ್ತಿನಲ್ಲಿ ಭಾರತದ ಅರ್ಷದೀಪ್ ಸಿಂಗ್, ಪಾಕಿಸ್ತಾನದ ಬಾಬರ್ ಆಝಂ, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹಾಗೂ ಜಿಂಬಾಬ್ವೆಯ ಸಿಕಂದರ್ ರಾಝಾ ಇದ್ದರು. ಆದರೆ, ಎಲ್ಲ ದಿಗ್ಗಜರನ್ನು ಹಿಂದಿಕ್ಕಿ ಅರ್ಷದೀಪ್ ಸಿಂಗ್ ದೊಡ್ಡ ಪ್ರಶಸ್ತಿ ಪಡೆದಿದ್ದಾರೆ. ಅರ್ಷದೀಪ್ ಟಿ 20 ವಿಶ್ವಕಪ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅರ್ಷದೀಪ್ ವರ್ಷದ ಟಿ20 ಕ್ರಿಕೆಟಿಗ
ಅರ್ಷದೀಪ್ ಸಿಂಗ್ ಟಿ20 ಮಾದರಿಯಲ್ಲಿ ಭಾರತದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ. 2024ರಲ್ಲಿ ಭಾರತದ ಪರ 18 ಟಿ20 ಪಂದ್ಯಗಳನ್ನಾಡಿರುವ ಅರ್ಷದೀಪ್ 36 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಅರ್ಷದೀಪ್ 2024 ರ ಟಿ20 ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದಾರೆ. ಆ ಟೂರ್ನಿಯಲ್ಲಿ ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿದ್ದ ಅವರು ಫೈನಲ್ ಪಂದ್ಯದಲ್ಲೂ 4 ಓವರ್ ಗಳಲ್ಲಿ 20 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಿತ್ತಿದ್ದರು.
ಭಾರತದ ಟಾಪ್ ಬೌಲರ್
2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅರ್ಷದೀಪ್ ಸಿಂಗ್ ಕೇವಲ 2 ವರ್ಷಗಳಲ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. ಭಾರತದ ಪರ ಟಿ20 ಮಾದರಿಯಲ್ಲಿ ಇಲ್ಲಿಯವರೆಗೆ 97 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.