ಭಾರತದ ವಿರುದ್ಧದ ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ನಂತರ, ಬ್ಯಾಟನ್ನು ಗನ್‌ನಂತೆ ಹಿಡಿದು ಸಂಭ್ರಮಿಸಿ ವಿವಾದಕ್ಕೆ ಕಾರಣವಾಗಿದ್ದ ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್, ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ವಿವಾದಾತ್ಮಕ ಸಂಭ್ರಮಾಚರಣೆಯನ್ನು ಸಮರ್ಥಿಸಿಕೊಂಡಿರುವ ಅವರು, “ನನ್ನ ಮನಸ್ಸಿಗೆ ಬಂದಿದ್ದನ್ನು ನಾನು ಮಾಡಿದ್ದೇನೆ. ಜನರು ಅದನ್ನು ಹೇಗೆ ಬೇಕಾದರೂ ಸ್ವೀಕರಿಸಲಿ, ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ,” ಎಂದು ಉಡಾಫೆಯ ಉತ್ತರ ನೀಡಿದ್ದಾರೆ.
ಏನಿದು ವಿವಾದ?
ಭಾನುವಾರ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದಲ್ಲಿ, ಪಾಕಿಸ್ತಾನದ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಅವರ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ಫರ್ಹಾನ್ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ, ಅವರು ತಮ್ಮ ಬ್ಯಾಟನ್ನು ಗನ್‌ನಂತೆ ಹಿಡಿದು, ಪೆವಿಲಿಯನ್ ಕಡೆಗೆ ಗುಂಡು ಹಾರಿಸುವ ರೀತಿಯಲ್ಲಿ ಸಂಭ್ರಮಿಸಿದ್ದರು. ಅವರ ಈ ವರ್ತನೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇದನ್ನು “ಪ್ರಚೋದನಕಾರಿ ಮತ್ತು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ನಡೆ” ಎಂದು ತೀವ್ರವಾಗಿ ಟೀಕಿಸಿದ್ದರು. ಉಗ್ರರು ನಡೆಸುವ ದಾಳಿಯನ್ನು ನೆನಪಿಸುವ ಈ ಸಂಭ್ರಮಾಚರಣೆಯು ಅಸಭ್ಯವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಫರ್ಹಾನ್ ಸ್ಪಷ್ಟನೆ
ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ, ಫರ್ಹಾನ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. “ನಾನು ಸಾಮಾನ್ಯವಾಗಿ 50 ರನ್ ಗಳಿಸಿದ ನಂತರ ಹೆಚ್ಚು ಸಂಭ್ರಮಿಸುವುದಿಲ್ಲ. ಆದರೆ, ಆ ಕ್ಷಣದಲ್ಲಿ ನನಗೆ ಇದ್ದಕ್ಕಿದ್ದಂತೆ ಸಂಭ್ರಮಿಸೋಣ ಎನಿಸಿತು, ಹಾಗಾಗಿ ಮಾಡಿದೆ. ಜನರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆಂದು ನನಗೆ ತಿಳಿದಿಲ್ಲ. ಅದರ ಬಗ್ಗೆ ನನಗೆ ಕಾಳಜಿಯೂ ಇಲ್ಲ,” ಎಂದು ಅವರು ಹೇಳಿದರು.
“ನಾವು ಎಲ್ಲಿ ಆಡಿದರೂ ಆಕ್ರಮಣಕಾರಿ ಕ್ರಿಕೆಟ್ ಆಡಬೇಕು. ಅದು ಭಾರತದ ವಿರುದ್ಧವೇ ಆಗಿರಬೇಕೆಂದೇನೂ ಇಲ್ಲ, ಪ್ರತಿಯೊಂದು ತಂಡದ ವಿರುದ್ಧವೂ ಆಕ್ರಮಣಕಾರಿಯಾಗಿ ಆಡಬೇಕು,” ಎಂದು ಫರ್ಹಾನ್ ತಮ್ಮ ಹೇಳಿಕೆಗೆ ಸೇರಿಸಿದರು.
ಆ ಪಂದ್ಯದಲ್ಲಿ ಫರ್ಹಾನ್ 45 ಎಸೆತಗಳಲ್ಲಿ 58 ರನ್ ಗಳಿಸಿದ್ದರೂ, ಪಾಕಿಸ್ತಾನ ತಂಡವು 171 ರನ್‌ಗಳಿಗೆ ಸೀಮಿತವಾಯಿತು ಮತ್ತು ಭಾರತವು 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಹಿಂದೆ ಕೂಡ, ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರು, ವಿರಾಟ್ ಕೊಹ್ಲಿ ಘೋಷಣೆಗಳಿಗೆ ಫೈಟರ್ ಜೆಟ್ ಸನ್ನೆ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದೀಗ ಫರ್ಹಾನ್ ಅವರ ‘ಗನ್ ಸೆಲೆಬ್ರೇಷನ್’ ವಿವಾದಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ



















