ಬೆಂಗಳೂರು: ಪೊಲೀಸರ ಸೋಗಿನಲ್ಲಿ ಹನಿಟ್ರ್ಯಾಪ್ (Honeytrap) ನಡೆಸಿ ತಲೆಮರೆಸಿಕೊಂಡಿದ್ದ ಸುಂದರಿಯನ್ನು ಪೊಲೀಸರು ಲಾಕ್ ಮಾಡಿದ್ದಾರೆ.
ಪ್ರಮುಖ ಆರೋಪಿ ನಯನಾ(nayana) ಸೇರಿದಂತೆ ಸಂತೋಷ್, ಅಜಯ್, ಜಯರಾಜ್ ಎಂಬುವವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣ ದಾಖಲಾಗುತ್ತಿದ್ದಂತೆ ನಯನಾ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ತಲೆ ಮರೆಸಿಕೊಂಡಿದ್ದಳು. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರೋಪಿ ನಯನಾ ತನ್ನ ಸ್ನೇಹಿತನ ಮೂಲಕ 57 ವರ್ಷದ ಸಿವಿಲ್ ಕಂಟ್ರ್ಯಾಕ್ಟರ್(Civil Contractor) ಪರಿಚಯ ಮಾಡಿಕೊಂಡಿದ್ದಳು. ನಂತರ ಸ್ನೇಹ ಬಯಸಿ, ಹಲವಾರು ಬಾರಿ ಸಣ್ಣ ಪ್ರಮಾಣದಲ್ಲಿ ಹಣ(money) ಪಡೆದುಕೊಂಡಿದ್ದಾಳೆ. ಮಾಗಡಿ ರಸ್ತೆಯಲ್ಲಿ ಹೋಗುತ್ತಿರುವಾಗ ಕಂಟ್ರ್ಯಾಕ್ಟರ್ ಸಿಕ್ಕಿದ್ದಾಗ ಮನೆಗೆ ಬಂದು ಟೀ ಕುಡಿದು ಹೋಗಿ ಎಂದು ಕರೆದಿದ್ದಾಳೆ. ಆಗ ಅಂಕಲ್ ಅವಳ ಮನೆಗೆ ಹೋಗಿದ್ದಾರೆ.
ಆಕೆಯ ಮನೆಯಲ್ಲಿದ್ದಾಗ ಪೊಲೀಸರ ಸೋಗಿನಲ್ಲಿ ಎಂಟ್ರಿ ಕೊಟ್ಟಿದ್ದ ಅಪರಿಚಿತರು, ವ್ಯಭಿಚಾರದ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ನಂತರ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದುಕೊಂಡಿದ್ದಾರೆ. ಕೆಳಗಡೆ ಮೇಡಂ ಇದ್ದಾರೆ. ಇಲ್ಲೇ ಸೆಟಲ್ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆ. 29 ಸಾವಿರ ರೂ. ನಗದು, ಫೋನ್ ಪೇನಲ್ಲಿ 26 ಸಾವಿರ ರೂ. ಹಾಗೂ ಮೈ ಮೇಲಿದ್ದ ಸುಮಾರು 5 ಲಕ್ಷ ರೂ. ಚಿನ್ನದ ಸರ, ಉಂಗುರ, ಬ್ರಾಸ್ ಲೈಟ್ ಕಿತ್ತುಕೊಂಡು ಪರಾರಿಯಾಗಿದ್ದರು. ಆಗ ಕಂಟ್ರ್ಯಾಕ್ಟರ್ ಪೊಲೀಸರಿಗೆ ದೂರು ನೀಡೋಣ ಎಂದು ಕೇಳಿದಾಗ, ಆಕೆ ಬೇರೆ ರೀತಿಯ ವರಸೆ ಆರಂಭಿಸಿದ್ದಾಳೆ. ಇದರಿಂದ ಅನುಮಾನಗೊಂಡ ವ್ಯಕ್ತಿ ದೂರು ಸಲ್ಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.