ಮೈಸೂರು : ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಕುನ್ಹಾ ವರದಿ ಅರೆಬೆಂದಿದೆ. ಸಿಎಂ – ಡಿಸಿಎಂ ಪೈಪೋಟಿಗೆ 11 ಜನ ಬಲಿಯಾದರು. ಈ ತಪ್ಪು ಮುಚ್ಚಿಕೊಳ್ಳಲು ಆರ್ ಸಿ ಬಿ ತಂಡವನ್ನು ಬಲಿ ಪಶು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ವಿಜಯೇಂದ್ರ, ಈ ವರದಿ ಸಮರ್ಪಕ ಮತ್ತು ನ್ಯಾಯಯುತವಾಗಿಲ್ಲ. ಸಿಎಂ ಗೆ ಪ್ರಾಮಾಣಿಕತೆ ಇದ್ದಿದ್ದರೇ ಇಂತಹ ವರದಿಯನ್ನು ನ್ಯಾಯಾಲಯದ ಮುಂದೆ ಇಡುತ್ತಿರಲಿಲ್ಲ ಎಂದಿದ್ದಾರೆ.
ದಲಿತರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿ ಎಂಬ ಸಿಎಂ ಟ್ವೀಟ್ ಗೆ ತಿರುಗೇಟು ನೀಡಿದ ವಿಜಯೇಂದ್ರ, ಬಿಜೆಪಿ ದಲಿತ ಸಮುದಾಯಕ್ಕೆ ಬಹಳ ದೊಡ್ಡ ಗೌರವ ಕೊಟ್ಟಿದೆ. ದಲಿತ ಸಮುದಾಯದ ರಾಮನಾಥ್ ಕೋವಿದ್ ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮುರನ್ನು ಕೂರಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಹಿಂದುಳಿದ ಸಮುದಾಯದವರು. ಇದನ್ನು ಸಿಎಂ ಸಿದ್ದರಾಮಯ್ಯ ಗಮನಿಸಲಿ ಎಂದಿದ್ದಾರೆ.
ದೇವರಾಜ್ ಅರಸುರಂತಹ ಹಿಂದುಳಿದ ನಾಯಕನಿಗೆ ಅವಮಾನ ಮಾಡಿದ್ದು ಕಾಂಗ್ರೆಸ್. ದೇವರಾಜ ಅರಸು ಅವರನ್ನು ಸಿಎಂ ಸ್ಥಾನದಿಂದ ಬಹಳ ಅಗೌರವದಿಂದ ಕೆಳಗೆ ಇಳಿಸಿದ್ದು ಕಾಂಗ್ರೆಸ್ ಎನ್ನುವುದನ್ನು ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಲಿ ಎಂದು ಪ್ರತ್ಯುತ್ತರ ನೀಡಿದ್ದಾರೆ.



















