ನವದೆಹಲಿ : ಭಾರತೀಯ ಕ್ರಿಕೆಟ್‌ನ ಇಬ್ಬರು ಆಧಾರಸ್ತಂಭಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಮತ್ತೆ ಚರ್ಚೆಗಳು ಗರಿಗೆದರಿವೆ. ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗೆ ಈ ಇಬ್ಬರೂ ದಿಗ್ಗಜರು ತಂಡಕ್ಕೆ ಮರಳುತ್ತಿರುವ ಹೊತ್ತಿನಲ್ಲೇ, ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು, ಇವರ ವೃತ್ತಿಜೀವನವು ಅಂತಿಮ ಹಂತದಲ್ಲಿದೆ ಎಂಬರ್ಥದ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದೆಹಲಿ ಟೆಸ್ಟ್ ಪಂದ್ಯದ ವೇಳೆ ‘ಜಿಯೋಹಾಟ್‌ಸ್ಟಾರ್’ ಜೊತೆ ಮಾತನಾಡಿದ ಕುಂಬ್ಳೆ, “ಈ ಇಬ್ಬರೂ ಆಟಗಾರರು ಮೈದಾನದಲ್ಲಿರುವಾಗ, ನಾವು ಅವರನ್ನು ಸಂಭ್ರಮಿಸೋಣ. ವರ್ಷಗಳಿಂದ ಅವರು ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ. 2027ರ ವಿಶ್ವಕಪ್ ಆಡುವ ಯೋಚನೆ ಅವರ ತಲೆಯಲ್ಲಿದ್ದರೂ, ಅದಕ್ಕೆ ಇನ್ನೂ ಎರಡು ವರ್ಷಗಳಿವೆ. ಭವಿಷ್ಯದ ಬಗ್ಗೆ ಚಿಂತಿಸುವ ಬದಲು, ಅವರು ಆಡುವ ಪ್ರತಿ ಕ್ಷಣವನ್ನು ಆನಂದಿಸೋಣ,” ಎಂದು ಹೇಳುವ ಮೂಲಕ, ಈ ದಿಗ್ಗಜರ ವಿದಾಯದ ದಿನಗಳು ದೂರವಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ 38 ವರ್ಷದ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದ್ದರೆ, 36 ವರ್ಷದ ವಿರಾಟ್ ಕೊಹ್ಲಿ ಐಪಿಎಲ್ 2025ರ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇಬ್ಬರೂ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದು, ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.
ಅಬ್ಬರ ಹೆಚ್ಚು
“ರೋಹಿತ್ ಈಗ ನಾಯಕರಲ್ಲದ ಕಾರಣ, ಅವರ ಮೇಲಿನ ನಾಯಕತ್ವದ ಹೊರೆ ಮತ್ತು ಜವಾಬ್ದಾರಿ ಕಡಿಮೆಯಾಗಿದೆ. ಹಾಗಾಗಿ, ಅವರು ತಮ್ಮ ಬ್ಯಾಟಿಂಗ್ ಮೇಲೆ ಸಂಪೂರ್ಣವಾಗಿ ಗಮನಹರಿಸಿ, ಆಟವನ್ನು ಆನಂದಿಸಬೇಕು. 2027ರ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯ ಅವರಿಗಿಲ್ಲ. ಇಬ್ಬರೂ ಅನುಭವಿ ಆಟಗಾರರಾಗಿದ್ದು, ಸಹಜವಾಗಿಯೇ ನೀವು ಅವರನ್ನು ತಂಡದಲ್ಲಿ ಬಯಸುತ್ತೀರಿ. ಆದರೆ, ವರ್ಷದಿಂದ ವರ್ಷಕ್ಕೆ ಅವರ ಪ್ರದರ್ಶನವನ್ನು ನೋಡಿಕೊಂಡು ಮುಂದುವರೆಯುವುದು ಉತ್ತಮ,” ಎಂದು ಕುಂಬ್ಳೆ ಸಲಹೆ ನೀಡಿದ್ದಾರೆ.
2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನೋವು ಇಬ್ಬರಿಗೂ ಇದೆ. ಹಾಗಾಗಿ, 2027ರ ವಿಶ್ವಕಪ್ ಗೆಲ್ಲುವ ಹಸಿವು ಅವರಿಗಿರಬಹುದು ಎಂದು ಹೇಳಿದ ಕುಂಬ್ಳೆ, ಆಸ್ಟ್ರೇಲಿಯಾ ಪ್ರವಾಸವು ಈ ಇಬ್ಬರಿಗೂ ಒಂದು ದೊಡ್ಡ ಸವಾಲಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಯ್ಕೆ ಸಮಿತಿಯು ಈಗಾಗಲೇ, ಯಾರಿಗೂ ತಂಡದಲ್ಲಿ ‘ಖಚಿತ ಸ್ಥಾನ’ವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಯುವ ಆಟಗಾರರಿಂದ ತೀವ್ರ ಪೈಪೋಟಿ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕುಂಬ್ಳೆ ಅವರ ಹೇಳಿಕೆಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.