ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (AR Rahman) ಅವರಿಗೆ ಭಾನುವಾರ ಬೆಳಗ್ಗೆ ದಿಢೀರನೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ ಎ.ಆರ್.ರೆಹಮಾನ್ ಅವರು ಎದೆನೋವು ಎಂದು ಹೇಳಿದ್ದಾರೆ. ಕೂಡಲೇ ಅವರನ್ನು ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸದ್ಯಕ್ಕೆ ಎ.ಆರ್. ರೆಹಮಾನ್ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಇಸಿಜಿ ಹಾಗೂ ಎಕೋ ಪರೀಕ್ಷೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬೆಳಗ್ಗೆ 7.30ಕ್ಕೆ ಎ.ಆರ್. ರೆಹಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ವೈದ್ಯರು ಆ್ಯಂಜಿಯೋಗ್ರಾಂ ಮಾಡಬಹುದು ಎಂದು ಆಸ್ಪತ್ರೆಯ ಉನ್ನತ ಮೂಲಗಳು ತಿಳಿಸಿವೆ. ಚೆನ್ನೈನ ಅಪೋಲೊ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಸಿನಿಮಾ ರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ಸಂಗೀತ ಸಂಯೋಜಕರಾಗಿ ಎ.ಆರ್. ರೆಹಮಾನ್ ರೆಹಮಾನ್ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಡುಗಾರರಾಗಿ, ಸಾಹಿತ್ಯ ರಚನಾಕಾರರಾಗಿಯೂ ಅವರು ಖ್ಯಾತಿ ಗಳಿಸಿದ್ದಾರೆ. ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾಗೆ ಇವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಸಂಗೀತ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಗ್ರ್ಯಾಮಿ ಪ್ರಶಸ್ತಿಯೂ ಇವರಿಗೆ ಒಲಿದುಬಂದಿದೆ.