ಮಂಗಳೂರು : ಸ್ಯಾಂಡ್ ಬಜಾರ್ ಅಪ್ಲಿಕೇಶನ್ ಮಾದರಿಯಲ್ಲಿ ಕೆಂಪು ಕಲ್ಲುಗಳಿಗೂ ಅಪ್ಲಿಕೇಶನ್ ಆರಂಭಿಸಿ ಸರ್ಕಾರದ ಮೂಲಕವೇ ದರ ನಿಗದಿಪಡಿಸಿ ಅತೀ ಕಡಿಮೆ ಬೆಲೆಗೆ ನಿಗದಿತ ಸಮಯದಲ್ಲಿ ಕೆಂಪು ಕಲ್ಲು ಪೂರೈಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು. ಟಿ ಖಾದರ್ ಹೇಳಿದ್ಧಾರೆ.
ಕೆಂಪುಕಲ್ಲು ಗಣಿಗಾರಿಕೆ ಸಂಪ್ರದಾಯದ ರೀತಿಯಲ್ಲಿ ಬೆಳೆದು ಬಂದಿದೆ. ಕಾನೂನು ಬೇಕಾದರೂ ಬದಲಾವಣೆ ಮಾಡಬಹುದು. ಆದರೇ ಸಂಪ್ರದಾಯವನ್ನಲ್ಲ. ಕೆಲವು ಸೂಕ್ತ ನಿಯಮಗಳನ್ನು ಜಾರಿಗೊಳಿಸಿ ಕೆಂಪು ಕಲ್ಲು ಜನಸಾಮಾನ್ಯರಿಗೆ ದೊರಕುವ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಕರಾವಳಿಯಲ್ಲಿ ಉಪ್ಪಿನಂಶ ಹೆಚ್ಚಳವಾಗಿದ್ದು, ವಿಪರೀತ ಗಾಳಿ ಮಳೆ ಸುರಿಯುವ ಪ್ರದೇಶವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ಮನೆ, ಕಟ್ಟಡಗಳನ್ನು ಕೆಂಪು ಕಲ್ಲುಗಳಿಂದಲೇ ನಿರ್ಮಿಸುತ್ತಾರೆ. ಜನಸಾಮಾನ್ಯರಿಗೆ ಅತಿ ಕಡಿಮೆ ಬೆಲೆಯಲ್ಲಿ ಕೆಂಪು ಕಲ್ಲು ದೊರಕಲು ಬೇಕಾದ ವ್ಯವಸ್ಥೆ ಹಾಗೂ ಕ್ವಾರಿಗಳನ್ನು ಗುತ್ತಿಗೆ ನೀಡಲು ನಿಯಮಗಳನ್ನು ಸರಳೀಕರಣಗೊಳಿಸಿ ಏಕಗವಾಕ್ಷಿ ನೀತಿಯನ್ನು ಜಾರಿಗೊಳಿಸಲು ಸೂಚಿಸಲಾಗಿದೆ. ಅತಿ ಶೀಘ್ರವೇ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.