ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚರ್ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಉತ್ತಮ ಪ್ರದರ್ಶನ ತೋರಿದ್ದಾರೆ.
ಜಾರ್ಖಂಡ್ ವಿರುದ್ಧ ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಪರ ಶತಕ ಸಿಡಿಸಿ ಮಿಂಚಿದ್ದಾರೆ. ಆಂಧ್ರ ಪ್ರದೇಶದ ಮುಲಪಾಡುವಿನಲ್ಲಿ ನಡೆದ ಈ ಪಂದ್ಯದಲ್ಲಿ 153 ಎಸೆತಗಳನ್ನು ಎದುರಿಸಿದ ಅನ್ವಯ್ ದ್ರಾವಿಡ್ 10 ಬೌಂಡರಿ ಮತ್ತು 2 ಸಿಕ್ಸರ್ ಗಳಿಂದ ಅಜೇಯ 100 ರನ್ ಗಳಿಸಿದ್ದಾರೆ. ಕೆಎಸ್ ಸಿಎ ಅಂಡರ್-16 ಅಂತರ ವಲಯ ಪಂದ್ಯಾವಳಿಯಲ್ಲಿ ತುಮಕೂರು ವಲಯದ ವಿರುದ್ಧವೂ ಅನ್ವಯ್ ದ್ರಾವಿಡ್ ಅಜೇಯ 200 ರನ್ ಗಳಿಸಿ ಮಿಂಚಿದ್ದರು.
16 ವರ್ಷದೊಳಗಿನವರ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಜಾರ್ಖಂಡ್ 387 ರನ್ ಗಳಿಸಿತ್ತು. ಕರ್ನಾಟಕದ ಪರ ಆರಂಭಿಕರು ಬಲಿಷ್ಠ ಇನ್ನಿಂಗ್ಸ್ ಆಡಿದ್ದರು. ಆರ್ಯ ಗೌಡ ಮತ್ತು ನಾಯಕ ಧ್ರುವ ಕೃಷ್ಣನ್ ಭರ್ಜರಿ ಶತಕ ಬಾರಿಸಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಉತ್ತಮ ಆರಂಭದ ಲಾಭ ಪಡೆದು ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ. ಕೊನೆಯ ದಿನದ ಆಟ ಮುಗಿಯುವ ಮುನ್ನವೇ ಶತಕ ಸಿಡಿಸಿ ಮಿಂಚಿದರು.
ಪರಿಣಾಮ ಕರ್ನಾಟಕ ತಂಡ 4 ವಿಕೆಟ್ ಗಳನ್ನು ಕಳೆದುಕೊಂಡು 441 ರನ್ ಗಳಿಸಿ ಜಾರ್ಖಂಡ್‌ಗಿಂತ 54 ರನ್ ಗಳ ಮುನ್ನಡೆ ಸಾಧಿಸಿತು. ಹೀಗಾಗಿ ಈ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿರುವ ಕರ್ನಾಟಕಕ್ಕೆ 3 ಅಂಕ ಲಭಿಸಿತು.