ಚೆನ್ನೈ: ತಮಿಳುನಾಡಿನಲ್ಲಿ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತವಾಗಿ ಬರೋಬ್ಬರಿ 41 ಮಂದಿ ಮೃತಪಟ್ಟಿದ್ದಾರೆ. ಅದರ ಕಹಿನೆನಪಿನಿಂದ ಹೊರಬರುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಉತ್ತರ ಚೆನ್ನೈನ ತಿರುವಲ್ಲೂರು ಜಿಲ್ಲೆಯ ಎನ್ನೋರ್ ವಿದ್ಯುತ್ ಸ್ಥಾವರ ನಿರ್ಮಾಣ ಸ್ಥಳದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬರೋಬ್ಬರಿ 9 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ವಿದ್ಯುತ್ ಸ್ಥಾವರ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕರು ಕಟ್ಟಿಕೊಂಡಿದ್ದ ಸ್ಕ್ಯಾಫೋಲ್ಡಿಂಗ್ ಮುರಿದುಬಿದ್ದ ಕಾರಣ ಈ ಅವಘಡ ಸಂಭವಿಸಿದೆ.
ಕಾರ್ಮಿಕರು ಸ್ಥಳದಲ್ಲೇ ಸಾವು
ಈ ವಿದ್ಯುತ್ ಸ್ಥಾವರ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡವರೆಲ್ಲ ಬಹುತೇಕ ಉತ್ತರ ಭಾರತದ ಕಡೆಯ ಕಾರ್ಮಿಕರೇ ಆಗಿದ್ದಾರೆ. ಸ್ಕ್ಯಾಫೋಲ್ಡಿಂಗ್ ಕುಸಿದು ಬಿದ್ದ ನಂತರ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಟ್ಟಡ ನಿರ್ಮಾಣ ಸ್ಥಳದಲ್ಲಿ ಅನೇಕ ಕಾರ್ಮಿಕರು ಇದ್ದರು. ಈ ವೇಳೆ ಒಂದು ಕಮಾನು 30 ಅಡಿ ಎತ್ತರದಿಂದ ಕುಸಿದುಬಿದ್ದಿದೆ. ಇದರಿಂದ ಕೆಳಗೆ ಇದ್ದ ಹಲವು ಕಾರ್ಮಿಕರು ಆ ಕಮಾನಿನ ಅಡಿಯಲ್ಲಿ ಸಿಲುಕಿದ್ದರು. 9 ಜನ ಮೃತಪಟ್ಟಿದ್ದು, ಇನ್ನೂ 10 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಮಿಳುನಾಡು ವಿದ್ಯುತ್ ಮಂಡಳಿಯ ಕಾರ್ಯದರ್ಶಿ ಮತ್ತು ತಮಿಳುನಾಡು ಉತ್ಪಾದನೆ ಮತ್ತು ವಿತರಣಾ ನಿಗಮ ಲಿಮಿಟೆಡ್ (TANGEDCO) ಅಧ್ಯಕ್ಷರಾದ ಡಾ. ಜೆ. ರಾಧಾಕೃಷ್ಣನ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಚೆನ್ನೈನಲ್ಲಿ ನಡೆದ ದುರಂತದ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಕಟ್ಟಡ ಕುಸಿತದಿಂದ ಸಂಭವಿಸಿದ ಅಪಘಾತದಿಂದ ದುಃಖಿತನಾಗಿದ್ದೇನೆ. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಘೋಷಿಸಲಾಗಿದೆ. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರೂ ಕೂಡ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.