ನವದೆಹಲಿ: ಕೇಂದ್ರ ಸರ್ಕಾರವು ಹಾಲು, ಮೊಸರು ಸೇರಿ ಹಲವು ವಸ್ತುಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವಿಧಿಸುತ್ತಿರುವುದಕ್ಕೆ ಆಗಾಗ ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ. ಅದರಲ್ಲೂ, ಅಗತ್ಯ ವಸ್ತುಗಳ ಬೆಲೆಯು ಜಾಸ್ತಿಯಾಗಿರುವ ಹೊತ್ತಿನಲ್ಲಿ ತೆರಿಗೆ ಬರೆಯು ಜನರನ್ನು ಬಾಧಿಸುತ್ತಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಐಷಾರಾಮಿ ವಸ್ತುಗಳ ಮೇಲೆ ಶೇ.1ರಷ್ಟು ಟಿಸಿಎಸ್ (ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್) ವಿಧಿಸಿದೆ.
ಹೌದು, 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಉತ್ಪನ್ನಗಳನ್ನು ಖರೀದಿ ಮಾಡಿದರೆ ಇನ್ನುಮುಂದೆ ವ್ಯಾಪಾರಿಗಳಿಗೆ ಶೇ.1ರಷ್ಟು ಟಿಸಿಎಸ್ ಬರೆ ಬೀಳಲಿದೆ. ಹ್ಯಾಂಡ್ ಬ್ಯಾಗ್, ಕೈಗಡಿಯಾರ, ಚಪ್ಪಲಿ, ಶೂ, ಸ್ಪೋರ್ಟ್ಸ್ ಉಡುಪುಗಳನ್ನು ಖರೀದಿಸಿದರೆ ಟಿಸಿಎಸ್ ಅನ್ವಯವಾಗಲಿದೆ. ಈ ವಸ್ತುಗಳ ಮೌಲ್ಯವು 10 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಮಾತ್ರ ಟಿಸಿಎಸ್ ವಿಧಿಸಲಾಗುತ್ತದೆ.
ಹೊಸ ಟಿಸಿಎಸ್ ನಿಯಮವು ಏಪ್ರಿಲ್ 22ರಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಅಧಿಸೂಚನೆ ಹೊರಡಿಸಿದೆ. 2024ರ ಹಣಕಾಸು ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರವು 2024ರ ಜುಲೈನಲ್ಲಿ ಮಂಡಿಸಿದ ಬಜೆಟ್ ನಲ್ಲಿ ಶೇ.1ರಷ್ಟು ಟಿಸಿಎಸ್ ಘೋಷಣೆ ಮಾಡಿತ್ತು. ಇದನ್ನು ಈಗ ಜಾರಿಗೆ ತಂದಿದೆ.
ಹೋಮ್ ಥಿಯೇಟರ್, ಸನ್ ಗ್ಲಾಸ್, ಪೋಲೊ ಅಥವಾ ರೇಸಿಂಗ್ ಗಳಿಗೆ ಖರೀದಿಸುವ ಕುದುರೆಗಳ ಖರೀದಿಗೂ ಟಿಸಿಎಸ್ ಅನ್ವಯವಾಗಲಿದೆ. ಇದರಿಂದ ಶ್ರೀಮಂತರಿಗೆ ಮಾತ್ರ ತೆರಿಗೆ ಹೊರೆಯಾಗುತ್ತದೆಯೇ ಹೊರತು, ಮಧ್ಯಮ ವರ್ಗದವರಿಗೆ ತೊಂದರೆಯಾಗುವುದಿಲ್ಲ ಎಂದು ತಿಳಿದುಬಂದಿದೆ.