ಬೆಂಗಳೂರು : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಬಹುನಿರೀಕ್ಷಿತ ಸೂಪರ್ ಫಾಸ್ಟ್ ರೈಲು ಯೋಜನೆಗೆ ಅನುಮೋದನೆ ನೀಡಿದ್ದಾರೆ. ಈ ರೈಲಿಗೆ ಅನುಮೋದನೆ ನೀಡಿದಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಸಚಿವ, ಸಂಸದ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.
ಈ ಮುಂಚೆ ಬೆಂಗಳೂರು-ಮುಂಬಯಿ ಮಧ್ಯೆ ಸಂಪರ್ಕ ಕಲ್ಪಿಸಲು ಉದ್ಯಾನ ಎಕ್ಸ್ ಪ್ರೆಸ್ ಮಾತ್ರ ಸಂಚಾರ ನಡೆಸುತ್ತಿತ್ತು. ಅದು ಬೆಂಗಳೂರಿನಿಂದ ಗುಂಟಕಲ್–ಸೊಲ್ಲಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಣ, ಬೆಂಗಳೂರು-ಮುಂಬೈ ಸಂಪರ್ಕಿಸುವ ಇನ್ನೊಂದು ಸೂಪರ್ ಫಾಸ್ಟ್ ರೈಲನ್ನು ಕರ್ನಾಟಕದ ಮಧ್ಯಭಾಗದಿಂದ ಓಡಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದರು.
ಇದೀಗ ಸಚಿವ ಪ್ರಹ್ಲಾದ್ ಜೋಶಿ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರು, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚರಿಸುವ ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಒಪ್ಪಿಗೆ ಸೂಚಿಸಿದ್ದು, ಅದಕ್ಕೀಗ ಅನುಮೋದನೆಯೂ ಸಿಕ್ಕಿದೆ.
ಹುಬ್ಬಳ್ಳಿ-ಧಾರವಾಡ ಮೂಲಕ ಸಂಚರಿಸುವ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಅನುಮೋದನೆ ನೀಡಿರುವ ರೈಲ್ವೆ ಸಚಿವರಿಗೆ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ. ನಮ್ಮ ಬಹುದಿನದ ಬೇಡಿಕೆಯಾಗಿದ್ದ ಈ ರೈಲಿಗಾಗಿ ನಾನು ಕೇಂದ್ರ ರೈಲ್ವೆ ಸಚಿವರಿಗೆ ವಿನಂತಿಸಿದ್ದೆ. ಲಕ್ಷಾಂತರ ಜನರಿಗೆ ಈ ರೈಲು ಸಂಚಾರದಿಂದ ಅನುಕೂಲವಾಗಲಿದೆ ಹಾಗೂ ವ್ಯಾಪಾರ ವಹಿವಾಟು ಮತ್ತಷ್ಟು ವೃದ್ಧಿಯಾಗಲಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.