ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಸಂಸತ್ ಭವನದಲ್ಲಿ ಮತ್ತೊಮ್ಮೆ ಗಂಭೀರ ಭದ್ರತಾ ಲೋಪದ ಘಟನೆ ವರದಿಯಾಗಿದೆ. ಶುಕ್ರವಾರ ಬೆಳಗ್ಗೆ ವ್ಯಕ್ತಿಯೊಬ್ಬ ಗೋಡೆ ಹಾರಿ ಸಂಸತ್ ಭವನದ ಆವರಣಕ್ಕೆ ನುಗ್ಗಿದ್ದು, ಆತನನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ಸುಮಾರು 6:30ರ ಹೊತ್ತಿಗೆ ಈ ಘಟನೆ ನಡೆದಿದೆ. ವ್ಯಕ್ತಿಯು ರೈಲ್ ಭವನದ ಕಡೆಯಿಂದ ಮರವೇರಿ ಗೋಡೆಯನ್ನು ಹಾರಿ, ಹೊಸ ಸಂಸತ್ ಭವನದ ‘ಗರುಡ ದ್ವಾರ’ದ ಬಳಿ ತಲುಪಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅನುಮಾನಾಸ್ಪದವಾಗಿ ವ್ಯಕ್ತಿ ಒಳಬರುತ್ತಿದ್ದಂತೆಯೇ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಆತನನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ವಿಶೇಷವೆಂದರೆ ಸಂಸತ್ತಿನ ಮುಂಗಾರು ಅಧಿವೇಶನವು ಗದ್ದಲ, ಕೋಲಾಹಲಗಳ ನಡುವೆ ಗುರುವಾರವಷ್ಟೇ ಮುಕ್ತಾಯಗೊಂಡಿತ್ತು. ಇದರ ಮರುದಿನವೇ ಈ ಘಟನೆ ನಡೆದಿರುವುದು ಹಲವು ಆತಂಕಗಳಿಗೆ ಕಾರಣವಾಗಿದೆ.
ಹಿಂದಿನ ಭದ್ರತಾ ಲೋಪ ಪ್ರಕರಣಗಳು
ಸಂಸತ್ ಭವನದಲ್ಲಿ ಭದ್ರತಾ ಲೋಪವಾಗುತ್ತಿರುವುದು ಇದೇ ಮೊದಲೇನಲ್ಲ. 2023ರ ದಾಳಿ: 2001ರ ಸಂಸತ್ ಮೇಲಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದೇ (2023, ಡಿಸೆಂಬರ್ 13) ಕರ್ನಾಟಕದ ಮೈಸೂರು ಮೂಲದ ಮನೋರಂಜನ್ ಡಿ. ಹಾಗೂ ಸಾಗರ್ ಶರ್ಮಾ ಎಂಬ ಇಬ್ಬರು ಶೂನ್ಯ ವೇಳೆಯಲ್ಲಿ ಲೋಕಸಭೆಯ ಸಾರ್ವಜನಿಕ ಗ್ಯಾಲರಿಯಿಂದ ಕೆಳಗೆ ಹಾರಿ, ಬಣ್ಣದ ಹೊಗೆಯನ್ನು ಉಗುಳುವ ಡಬ್ಬಿಗಳನ್ನು ಬಳಸಿ ಘೋಷಣೆ ಕೂಗಿದ್ದರು. ಅದೇ ಸಮಯದಲ್ಲಿ, ಸಂಸತ್ತಿನ ಹೊರಗೆ ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಎಂಬ ಇನ್ನಿಬ್ಬರು ಆರೋಪಿಗಳು ‘ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆ ಕೂಗಿ ಬಣ್ಣದ ಹೊಗೆ ಬಾಂಬ್ ಸಿಡಿಸಿದ್ದರು. ಈ ಪ್ರಕರಣದಲ್ಲಿ ಲಲಿತ್ ಝಾ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಇತ್ತೀಚೆಗೆ ದೆಹಲಿ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಲಿತ್ ಝಾ ಸಲ್ಲಿಸಿದ್ದ ಜಾಮೀನು ಅರ್ಜಿಯ ಕುರಿತು ದೆಹಲಿ ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ.
ಕಳೆದ ವರ್ಷದ ಘಟನೆ: ಕಳೆದ ವರ್ಷವೂ ಇದೇ ರೀತಿಯ ಘಟನೆಯಲ್ಲಿ, 20ರ ಹರೆಯದ ಯುವಕನೊಬ್ಬ ಸಂಸತ್ತಿನ ಆವರಣದ ಗೋಡೆ ಹಾರಿ ಒಳಗೆ ಜಿಗಿದಿದ್ದ. ಆತನನ್ನು ತಪಾಸಣೆ ಮಾಡಿದಾಗ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿರಲಿಲ್ಲ.
ಈಗ ನಡೆದ ಘಟನೆಯು ಸಂಸತ್ ಭವನದ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.


















