ಅಹಮದಾಬಾದ್. ನಿನ್ನೆ ನಿಜಕ್ಕೂ ಗುಜರಾತ್ ನ ಈ ನಗರಿ ಅಕ್ಷರಶಃ ಬೆಚ್ಚಿಬಿದ್ದಿತ್ತು. ಮೇಘಾನಿಯ ಜನವಸತಿ ಪ್ರದೇಶದಲ್ಲೇ ಜಗತ್ತಿನ ಅತಿ ದೊಡ್ಡ ವಿಮಾನ ಎನಿಸಿಕೊಳ್ಳುವ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಧರೆಗಪ್ಪಳಿಸಿತ್ತು.
ಇಲ್ಲಿನ ಬಿಜೆ ಆಸ್ಪತ್ರೆಯ ಹಾಸ್ಟೆಲ್ ಹಾಗೂ ಸಿಬ್ಬಂದಿ ವಸತಿ ಗೃಹಗಳಿಗೆ ಡಿಕ್ಕಿ ಹೊಡೆದಿದ್ದ ವಿಮಾನ ಲಂಡನ್ ಗೆ ತೆರಳಬೇಕಿತ್ತು. 242 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನ ಅತ್ಯಂತ ಘೋರ ಅಪಘಾತಕ್ಕೀಡಾಗಿತ್ತು. ಅಷ್ಟೇ ಅಲ್ಲಾ 241 ಮಂದಿಯನ್ನು ಆಹುತಿ ಪಡೆದಿದೆ. ಅದೃಷ್ಟವಶಾತ್ ಓರ್ವ ಪವಾಡ ಸದೃಷ ರೀತಿಯಲ್ಲಿ ಬದುಕುಳಿದಿದ್ದಾನೆ. ಹಾಗಂತಾ ಅಹಮದಾಬಾದ್ ನ ಇತಿಹಾಸವನ್ನು ಕೆದಕಿ ನೋಡಿದೆ. ಇದು ಈ ನಗರದಲ್ಲಾದ ಮೊದಲ ವಿಮಾನ ದುರಂತವಲ್ಲ. 37 ವರ್ಷಗಳ ಹಿಂದೆ ಇದೇ ನಗರದಲ್ಲಿ ಅಂದು ಘೋರ ದುರಂತ ಘಟಿಸಿತ್ತು. ಇಂಡಿಯನ್ ಏರ್ ಲೈನ್ಸ್ ನ ವಿಮಾನ ಪತನಗೊಂಡು 130 ಮಂದಿ ಹತರಾಗಿದ್ದರು.
1996ರಲ್ಲಿ ನಡೆದಿತ್ತು ದೇಶದ ಅತ್ಯಂತ ಕರಾಳ ದುರ್ಘಟನೆ
1996 ಹರಿಯಾಣದಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಭೀಕರ ದುರಂತ ಸಂಭವಿಸಿತ್ತು. ಹರ್ಯಾಣದ ದಾಧ್ರಿ ಚಕ್ರಿ ಪ್ರದೇಶದಲ್ಲಿ ಸೌದಿ ಏರ್ ಲೈನ್ಸ್ ಮತ್ತು ಕಜಕಿಸ್ಥಾನ್ ಏರ್ ಲೈನ್ಸ್ ವಿಮಾನಗಳು ಡಿಕ್ಕಿಯಾಗಿದ್ದವು. ಅಂದು ಒಂದು ವಿಮಾನ ಟೇಕ್ ಆಫ್ ಆಗುತ್ತಿದ್ದರೆ ಮತ್ತೊಂದು ಲ್ಯಾಂಡ್ ಆಗುತ್ತಿತ್ತು. ಈ ವೇಳೆ ಘಟಿಸಿದ ಡಿಕ್ಕಿಯಲ್ಲಿ 349 ಮಂದಿ ಪ್ರಯಾಣಿಕರು ಸಾವನಪ್ಪಿದ್ದರು.
ಕರ್ನಾಟಕದ ಮಂಗಳೂರಿನಲ್ಲೂ ಘಟಿಸಿತ್ತು ಘೋರ ಘಟನೆ
- ಮೇ 22 ಬೆಳಗ್ಗಿನ 6.20ಕ್ಕೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಏರಿಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ನಿಯಂತ್ರಣಕ್ಕೆ ಸಿಗದೆ ಕೆಂಜಾರಿನ ಗುಡ್ಡದಿಂದ ಕೆಳಜಾರಿ ಅಪಘಾತಕ್ಕೀಡಾಗಿತ್ತು. ಹೀಗೆ ಕೆಳಗುರುಳಿದ್ದ ವಿಮಾನ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿತ್ತು. ಈ ವೇಳೆ ವಿಮಾನದಲ್ಲಿದ್ದ 166 ಮಂದಿ ಪೈಕಿ 158 ಮಂದಿ ಬಲಿಯಾಗಿದ್ದರು. ಆರು ಹಸುಗೂಸುಗಳು, 19 ಮಕ್ಕಳು, 6 ವಿಮಾನ ಸಿಬ್ಬಂದಿ ಈ ವಿಮಾನದಲ್ಲಿ ಪ್ರಯಾಣಿಸಿದ್ದರು. ಅದೃಷ್ಟವೆನ್ನುವಂತೆ ಅಂದಿನ ಘಟನೆಯಲ್ಲಿ 8 ಮಂದಿ ಸಾವನ್ನೇ ಜಯಿಸಿ ಬಂದಿದ್ದರು.
ಭಾರತಕ್ಕಿದೆ ವಿಮಾನ ಅಪಘಾತದ ಕರಾಳ ಇತಿಹಾಸ
1990ರ ಫೆಬ್ರವರಿ 14ರಂದು ಇಂಡಿಯನ್ ಏರ್ ಲೈನ್ಸ್ ನ ವಿಮಾನ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಪತನವಾಗಿತ್ತು. ಈ ದುರ್ಘಟನೆಯಲ್ಲಿ 92 ಪ್ರಯಾಣಿಕರು ಬಲಿಯಾಗಿದ್ದರು. 1991ರ ಆಗಸ್ಟ್ 16ರಂದು ಮಣಿಪುರದ ಇಂಫಾಲ್ ನಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಪತನವಾಗಿ 69 ಮಂದಿ ಪ್ರಾಣತೆತ್ತಿದ್ದರು. 1993ರ ನವೆಂಬರ್ 12ರಂದು ಇಂಡಿಯನ್ ಏರ್ ಲೈನ್ಸ್ ನ ವಿಮಾನ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರನ್ ವೇಯಲ್ಲಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 55 ಪ್ರಯಾಣಿಕರು ಸಾವನಪ್ಪಿದ್ದರು. 2000 ಜುಲೈ 17ರಂದು ಅಲೈಯನ್ಸ್ ಏರ್ ನ ವಿಮಾನ ಬಿಹಾರದ ಪಟನಾದಲ್ಲಿ ಪತನವಾಗಿತ್ತು. ಈ ದುರ್ಘಟನೆಯಲ್ಲಿ 60 ಪ್ರಯಾಣಿಕರು ಜೀವ ತೆತ್ತಿದ್ದರು.



















