ಹಾಸನ: ಮದ್ಯಪ್ರಿಯರಿಗೆ ಆಗುತ್ತಿರುವ ಅನ್ಯಾಯ ಖಂಡಿಸುವುದಕ್ಕಾಗಿ ಮತ್ತೊಂದು ಕಚೇರಿ ಇಂದು ಲೋಕಾರ್ಪಣೆಗೊಂಡಿದೆ. ‘ನಿತ್ಯ ದುಡಿ.. ಸತ್ಯ ನುಡಿ.. ಸ್ವಲ್ಪ ಕುಡಿ.. ಮನೆಗೆ ನಡಿ ಎಂಬ ಘೋಷವಾಕ್ಯದಡಿ ಸ್ಥಾಪನೆಯಾದ ಕರ್ನಾಟಕ ಮದ್ಯಪ್ರಿಯರ ಸಂಘ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹಲವು ಬೇಡಿಕೆಗಳನ್ನು ಇಟ್ಟಿದೆ.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಮದ್ಯಪಾನ ಪ್ರಿಯರ ಹೋರಾಟ ಸಂಘ ಉದ್ಘಾಟನೆಯಾಗಿದೆ. ಅಲ್ಲದೇ, ಸರ್ಕಾರದ ಪ್ರಮುಖ ಮೂಲವಾಗಿರುವ ಕಾರಣ ಮದ್ಯ ಪ್ರಿಯರಿಗೆ ಸೂಕ್ತ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಈ ವೇಳೆ ಮದ್ಯಪಾನ ಪ್ರಿಯರಿಗೆ ಇನ್ಸೂರೆನ್ಸ್, ಬಾರ್‌ಗಳಲ್ಲಿ ರೆಸ್ಟ್‌ರೂಂ, ಮದ್ಯಪ್ರಿಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಕಳೆದ ವರ್ಷ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ವೇಳೆ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ “ಕುಡುಕ ಎಂಬ ಪದ ನಿಷೇಧಿಸಿ ಮದ್ಯಪ್ರಿಯರು (Karnataka Liquor Lovers) ಎಂದು ಘೋಷಿಸಬೇಕು, ಬಾರ್‌ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಮದ್ಯಪ್ರಿಯರ ಭವನ ಸ್ಥಾಪಿಸಬೇಕು. ಪ್ರತಿ ಬಾಟಲ್ ಮೇಲೆ ಹಣ ಪಡೆದು ಇನ್ಸುರೆನ್ಸ್ ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಕಳೆದ ವರ್ಷ ಹಾಸನದಲ್ಲಿ ಕಚೇರಿಯೊಂದು ಉದ್ಘಾಟನೆಗೊಂಡಿತ್ತು. ಈಗ ಬೇಲೂರಿನಲ್ಲಿ ಮತ್ತೊಂದು ಕಚೇರಿ ಉದ್ಘಾಟನೆಯಾಗಿದೆ.