ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ವಿರುದ್ಧ ಪೊಲೀಸರು ಹಲವಾರು ಆಯಾಮಗಳಲ್ಲಿ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಅಲ್ಲದೇ, ದರ್ಶನ್ ಜಾಮೀನಿನ ಮೇಲೆ ಹೊರ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ದರ್ಶನ್ ಪ್ರಕರಣದಲ್ಲಿ ಹಣದ ವ್ಯವಹಾರದ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕ್ಯಾಶ್ ಮೂಲಕ ಪ್ರಕರಣದಲ್ಲಿ ಒಂದಿಷ್ಟು ವ್ಯವಹಾರಗಳು ನಡೆದಿರುವುದು ಬಹಿರಂಗವಾಗಿದೆ. ಹೀಗಾಗಿ ಆನ್ ಲೈನ್ ಮೂಲಕವೂ ಹಣದ ವ್ಯವಹಾರ ನಡೆದಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಬೆಂಗಳೂರಿನ ವಿವಿಧ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಅವುಗಳ ಮಾಹಿತಿ ಪಡೆಯಲಾಗುತ್ತಿದೆ.
14 ಜನ ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕೆವೈಸಿ ಮಾಹಿತಿ ಪಡೆದಿದ್ದಾರೆ. ಕೊಲೆಯ ಹಿಂದೆ ಅಥವಾ ನಂತರದ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ವ್ಯವಹಾರ ನಡೆದಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳೊಂದಿಗೆ ಆನ್ ಲೈನ್ ಮೂಲಕ ದರ್ಶನ್ ಏನಾದರೂ ವ್ಯವಹಾರ ಇಟ್ಟುಕೊಂಡಿರುವುದು ಬಹಿರಂಗವಾದರೆ, ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.