ಚಿಕ್ಕಮಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ (Gold Smuggling Case) ಈಗಾಗಲೇ ನಟಿ ರನ್ಯಾ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಮಧ್ಯೆ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ರನ್ಯಾ ರಾವ್ (Ranya Rao) ಆಪ್ತನನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯ ಕಾರು ಚಾಲಕ ದೀಪಕ್ ನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ, ಪ್ರಕರಣದಲ್ಲಿ ಆತನ ಪಾತ್ರ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಧಿಕಾರಿಗಳು ಮಾತ್ರ ತನಿಖೆ ನಡೆಸುತ್ತಿದ್ದಾರೆ.
ಮಾ. 3 ರಂದು ದುಬೈನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ರನ್ಯಾಳನ್ನು ಡಿಆರ್ ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ಮಗಳು ಎಂದು ಹೇಳಿಕೊಂಡಿದ್ದಳು. ರನ್ಯಾಳನ್ನು ತಪಾಸಣೆ ಇಲ್ಲದೇ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್‌ಸ್ಟೇಬಲ್ ಬಸವರಾಜ್ ಹೋಗಿದ್ದ ಎನ್ನಲಾಗಿದೆ.
ರನ್ಯಾಳನ್ನು ಲೋಹ ಪರಿಶೋಧಕ ಕಚೇರಿಯಲ್ಲಿ ಪರೀಕ್ಷಿಸಿದಾಗ 1 ಕೆಜಿ ತೂಕದ 14 ಗೋಲ್ಡ್ ಬಿಸ್ಕೆಟ್ ತಂದಿರುವುದು ಪತ್ತೆಯಾಗಿತ್ತು. ಕೂಡಲೇ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಾ.10 ರಂದು ಕೋರ್ಟ್ ರನ್ಯಾ ರಾವ್‌ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ. ಹೀಗಾಗಿ ರನ್ಯಾ ಮಾ. 24ರ ವರೆಗೆ ಜೈಲಿನಲ್ಲೇ ಇರಲಿದ್ದಾಳೆ.