ದಕ್ಷಿಣ ಆಪ್ರಿಕಾ ವಿರುದ್ಧ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದ ಭಾರತೀಯ ಆಟಗಾರ ತಿಲಕ್ ವರ್ಮಾ ಅವರು ಈಗ ಮತ್ತೊಂದು ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹೈದರಾಬಾದ್ ಮತ್ತು ಮೆಘಾಲಯ ತಂಡಗಳ ಮಧ್ಯೆ ಪಂದ್ಯ ನಡೆದಿತ್ತು. ಈ ವೇಳೆ ಹೈದರಾಬಾದ್ ತಂಡದ ಪರ ಆಡಿದ ತಿಲಕ್ ವರ್ಮಾ ಶತಕ ಸಿಡಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ತಿಲಕ್ ವರ್ಮಾ ಮೈದಾನದ ಮೂಲೆ ಮೂಲೆಗೂ ಬಾಲ್ ಅಟ್ಟಿದರು. ಕೇವಲ 67 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 14 ಬೌಂಡರಿಗಳೊಂದಿಗೆ 151 ರನ್ ಗಳಿಸಿದರು. ಈ ಮೂಲಕ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಬರೆದರು. ಹಿಂದೆ ಈ ದಾಖಲೆಯ ಶ್ರೇಯಸ್ ಅಯ್ಯರ್ ಹೆಸರಿನಲ್ಲಿತ್ತು. ಅವರು 147 ರನ್ ಗಳಿಸಿದ್ದರು.
ತಿಲಕ್ ವರ್ಮಾ ಅವರ ಸ್ಫೋಟಕ ಶತಕದಿಂದಾಗಿ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಮೇಘಾಲಯ ತಂಡ ಕೇವಲ 69 ರನ್ಗಳಿಗೆ ಆಲೌಟ್ ಆಗಿ ಸೋಲೋಪ್ಪಿಕೊಂಡಿತು.