ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಬಳಿಕ ಡೊನಾಲ್ಡ್ ಟ್ರಂಪ್ (Donald Trump) ಅವರು ಕ್ರಾಂತಿಕಾರಕ ನಿರ್ಧಾರಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಪೌರತ್ವ ನಿಯಮಗಳ ತಿದ್ದುಪಡಿ, ಅಕ್ರಮ ವಲಸಿಗರ ಗಡೀಪಾರು ಸೇರಿ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಅವರು ಮತ್ತೊಂದು ತೀರ್ಮಾನ ತೆಗೆದುಕೊಂಡಿದ್ದು, ಇಂಗ್ಲಿಷ್ಅನ್ನು ಅಮೆರಿಕದ ಅಧಿಕೃತ ಭಾಷೆ ಎಂದು ಘೋಷಿಸಿದ್ದಾರೆ.
ಇಂಗ್ಲಿಷ್ ಈಗ ಅಮೆರಿಕದ ಅಧಿಕೃತ ಭಾಷೆ ಎಂಬ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಅವರು ಸಹಿ ಮಾಡಿದ್ದು, ಶ್ವೇತಭವನವು ಈ ಕುರಿತು ಪ್ರಕಟಣೆ ಹೊರಡಿಸಿದೆ. ಡೊನಾಲ್ಡ್ ಟ್ರಂಪ್ ನೂತನ ಆದೇಶದಿಂದ ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳು ಇನ್ನು ಮುಂದೆ ಇಂಗ್ಲಿಷ್ ನಲ್ಲಿ ಮಾತ್ರ ಸರ್ಕಾರದ ಪ್ರಕಟಣೆಗಳು, ಅಧಿಸೂಚನೆಗಳನ್ನು ಹೊರಡಿಸುವ ಅನಿವಾರ್ಯತೆಗೆ ಸಿಲುಕಿದಂತಾಗಿದೆ. ಬಿಲ್ ಕ್ಲಿಂಟನ್ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಬೇರೆ ಭಾಷೆಗಳಲ್ಲೂ ಅಧಿಸೂಚನೆ, ಪ್ರಕಟಣೆ ಹೊರಡಿಸಲು ಅನುಮತಿ ನೀಡಿದ್ದರು. ಈಗ ಟ್ರಂಪ್ ಆದೇಶವು ಇದನ್ನು ರದ್ದುಗೊಳಿಸುತ್ತದೆ.
“ಇಂಗ್ಲಿಷ್ ಈಗ ಅಮೆರಿಕದ ಅಧಿಕೃತ ಭಾಷೆಯಾಗಿದೆ. ಸರ್ಕಾರದ ಆದೇಶಗಳನ್ನು ಇಂಗ್ಲಿಷ್ ನಲ್ಲಿ ಹೊರಡಿಸುವ ಜತೆಗೆ ದೇಶದ ಮೌಲ್ಯಗಳನ್ನು ಮರುಸ್ಥಾಪಿಸುವ ನಿರ್ಧಾರವೂ ಇದಾಗಿದೆ. ಸಮಾಜದಲ್ಲಿ ಇದರಿಂದ ಹೆಚ್ಚಿನ ದಕ್ಷತೆ ಕೂಡ ಬರುತ್ತದೆ. ಅಮೆರಿಕದ ನಾಗರಿಕರು ಇಂಗ್ಲಿಷ್ ನಲ್ಲಿಯೇ ಎಲ್ಲ ಆದೇಶಗಳನ್ನು ಓದಬಹುದಾಗಿದೆ. ಇದರಿಂದ ದೇಶದ ಏಳಿಗೆ ಸಾಧ್ಯವಾಗಲಿದೆ” ಎಂದು ಶ್ವೇತಭವನದ ಆದೇಶದಲ್ಲಿಉಲ್ಲೇಖಿಸಲಾಗಿದೆ.
“ಇಂಗ್ಲಿಷ್ ನಲ್ಲಿ ಮಾತನಾಡುವುದರಿಂದ ಆರ್ಥಿಕ ಏಳಿಗೆ ಜತೆಗೆ ಹೊಸದಾಗಿ ಅಮೆರಿಕಕ್ಕೆ ಬರುವವರು ಸಂವಹನ ಮಾಡಲು, ಇಲ್ಲಿನ ಜನರ ಜತೆ ಬೆರೆಯಲು ಸಾಧ್ಯವಾಗಲಿದೆ. ನಮ್ಮ ದೇಶದ ಸಂಸ್ಕೃತಿಯಲ್ಲೂ ಅವರು ಒಂದಾಗಬಹುದು” ಎಂದು ತಿಳಿಸಲಾಗಿದೆ. ಜಗತ್ತಿನಲ್ಲಿ ಇದುವರೆಗೆ 30ಕ್ಕೂ ಅಧಿಕ ದೇಶಗಳು ಇಂಗ್ಲಿಷ್ಅನ್ನು ಅಧಿಕೃತ ಭಾಷೆ ಎಂದು ಘೋಷಿಸಿವೆ.