ಬೆಂಗಳೂರು- ಜೀ಼ ಕನ್ನಡ ಪ್ರತಿಬಾರಿಯೂ ಮನರಂಜನೆಯೊಂದಿಗೆ ಮನಮುಟ್ಟುವ ಕಥೆ, ಸಂದೇಶಗಳನ್ನು ಹೊತ್ತು ತಂದು ವೀಕ್ಷಕರನ್ನು ಅಚ್ಚರಿಗೆ ತಳ್ಳುತ್ತಲ್ಲೇ ಇರುತ್ತದೆ. ಈ ಬಾರಿ ವಾಹಿನಿಯ ಜನಪ್ರಿಯ ಕಥೆಗಳಲ್ಲೊಂದಾದ ‘ಅಣ್ಣಯ್ಯ‘ ಹೆಣ್ಣು ಮಕ್ಕಳ ಪರವಾಗಿ ನಿಂತು, ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ಹೆಣ್ಣು ಮಕ್ಕಳ ತಿಂಗಳ ನೋವಿನ ಬಗ್ಗೆ ಬೆಳಕು ಚೆಲ್ಲಲು ಕಥಾ ಹಂದರದಲ್ಲೇ ಹಾದಿ ಹುಡುಕಿಕೊಂಡಿರುವ ತಂಡ, ಹೆಣ್ಣುಮಕ್ಕಳ ದೇಹದಲ್ಲಾಗುವ ಸಹಜ ಪ್ರಕ್ರಿಯೆಯ ಬಗ್ಗೆ ಸಮಾಜಕ್ಕಿರುವ ಮುಜುಗರ, ಮಡಿವಂತಿಕೆ, ಮೂಢನಂಬಿಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದೆ.

ಮಾರಿಗುಡಿ ಎಂಬ ಹಳ್ಳಿಯಲ್ಲಿ ನಡೆಯುವ ಈ ಕಥೆಯಲ್ಲಿ ಕಥಾನಾಯಕ ಶಿವು ತನ್ನ ಅಂಗಡಿಯಲ್ಲಿ ಊರ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ‘ಮಡಿಲು’ ಎಂಬ ಹೊಸ ಯೋಜನೆ ಶುರುಮಾಡಿ ಎಲ್ಲರ ಮನಗೆದ್ದಿದ್ದಾನೆ. ಋತುಸ್ರಾವದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು ಮತ್ತು ಮನೆಯಲ್ಲಿರುವ ಗಂಡುಮಕ್ಕಳು ಮುಜುಗರ ಬಿಟ್ಟು ಅವರ ಜತೆ ನಿಲ್ಲಬೇಕು ಎಂದು ನಾಯಕಿ ಡಾಕ್ಟರ್ ಪಾರು ಜತೆ ಸೇರಿ ದೊಡ್ಡ ಸಂದೇಶ ನೀಡಿರುವ ಶಿವು, ತನ್ನ ಅಂಗಡಿಯಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ ಮಾಡಿದ್ದು, ತನ್ನಂತೆಯೇ ಇತರರು ಕೂಡಾ ತಮ್ಮ ಕೈಲಾದಂತೆ ತಮ್ಮ ತಮ್ಮ ಊರುಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದ್ದಾನೆ.
ಈ ವಿಷಯದ ಪ್ರೊಮೊ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು ಮುಖ್ಯವಾಹಿನಿಯು ಮನರಂಜನೆಯೊಂದಿಗೆ ಇಂತಹ ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆಯುತ್ತಿರುವುದಕ್ಕೆ ಭರಪೂರ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ : ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಮುಖ್ಯ ತರಬೇತುದಾರರ ನೇಮಕಾತಿ : 2 ಲಕ್ಷ ರೂ. ವೇತನ



















