ತಮಿಳುನಾಡು : ತಮಿಳುನಾಡು ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿರುವಾಗಲೇ ಬಿಜೆಪಿ ನಾಯಕ ಕೆ. ಅಣ್ಣಾಮಲೈ, ಪಕ್ಷ ನೀಡಿದ್ದ ಉಸ್ತುವಾರಿ ಜವಾಬ್ದಾರಿಗೆ ದಿಢೀರ್ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ತಿಂಗಳು ಬಾಕಿ ಇದ್ದು, ಎಐಎಡಿಎಂಕೆ ಜೊತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ರಾಜ್ಯದ ಚುನಾವಣೆಯಲ್ಲಿ ತಳಮಟ್ಟದಿಂದಲೂ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತಿದೆ. ಅಣ್ಣಾಮಲೈ ಅವರಿಗೆ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಉಸ್ತುವಾರಿಯನ್ನು ಪಕ್ಷ ಹೇಗಲೇರಿಸಿತ್ತು. ಸಿಂಗನಲ್ಲೂರು, ಮಧುರೈ ದಕ್ಷಿಣ, ವಿರುಗಂಬಕ್ಕಂ, ಕರೈಕುಡಿ, ಶಿವೈಕುಟಂ ಮತ್ತು ಪದ್ಮನಾಬಪುರಂ ಕ್ಷೇತ್ರಗಳ ಉಸ್ತುವಾರಿಯನ್ನು ಅಣ್ಣಾಮಲೈಗೆ ನೀಡಲಾಗಿತ್ತು.
ಆದರೆ, ಇಂದು ತಮ್ಮ ಈ ಚುನಾವಣಾ ಜವಾಬ್ದಾರಿಗೆ ಅಣ್ಣಾಮಲೈ ರಾಜೀನಾಮೆ ಘೋಷಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ. ಈ ಕುರಿತು ಕೋಯಮತ್ತೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಣ್ಣಾಮಲೈ, ತಮ್ಮ ತಂದೆಯ ಅನಾರೋಗ್ಯದ ಹಿನ್ನೆಲೆ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷ ನೀಡಿರುವ ಈ ಸಾಮಾನ್ಯ ಹೊಣೆಗಾರಿಕೆಯನ್ನು ನಿರ್ವಹಿಸಲಾಗುತ್ತಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಪದೇ ಪದೆ ಪ್ರವಾಸ ಮಾಡುವುದು ಅಸಾಧ್ಯವಾಗಿದ್ದು, ಈ ಕುರಿತು ರಾಜ್ಯಾಧ್ಯಕ್ಷರಾದ ನೈನರ್ ನಾಗೇಂದ್ರನ್ ಮತ್ತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಚುನಾವಣಾ ಪ್ರವಾಸದ ಉಸ್ತುವಾರಿ ಹುದ್ದೆಯಿಂದ ಕೆಳಗಿಳಿಯುವ ಕುರಿತು ಅವರಿಗೆ ಮನವರಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇನ್ನು, ಪಕ್ಷದ ಪರವಾಗಿ ನಾನು ಪ್ರಚಾರ ಮಾಡುತ್ತೇನೆ. ನನಗೆ ವಹಿಸಿದ ಆರು ಕ್ಷೇತ್ರಗಳಿಗೆ ಪಕ್ಷದ ನಾಯಕರು ಮತ್ತೊಬ್ಬ ನಾಯಕರ ನೇಮಕಾತಿ ಮಾಡುತ್ತಾರೆ ಎಂದು ಹೇಳಿದ್ದಾರೆ.
ನೀವು ವಿಧಾಸನಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ ಅಥವಾ ದೆಹಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಈ ಬಗ್ಗೆ ಗೊತ್ತಿಲ್ಲ. ಪಕ್ಷದ ನಾಯಕರು ಹೇಳಿದಂತೆ ಮಾಡುತ್ತೇನೆ. ಸಿಂಗನಲ್ಲೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ನನ್ನ ನಿರ್ಧಾರ ತಿಂಗಳ ಬಳಿಕ ತಿಳಿಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಲೋಕಸಭೆಯಲ್ಲಿ ಭಾರಿ ಕೋಲಾಹಲ | ಸ್ಪೀಕರ್ ಮೇಲೆ ಕಾಗದ ಎಸೆದ 8 ವಿಪಕ್ಷ ಸಂಸದರು ಅಧಿವೇಶನದಿಂದ ಅಮಾನತು!


















