ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಸಜ್ಜಾಗಿದೆ. ಪ್ರಶಸ್ತಿ ಎತ್ತಿಹಿಡಿದು ಇತಿಹಾಸ ನಿರ್ಮಿಸಲು ಕೇವಲ ಒಂದು ಹೆಜ್ಜೆಯಷ್ಟೇ ಬಾಕಿ ಇರುವ ಈ ಮಹತ್ವದ ಘಟ್ಟದಲ್ಲಿ, ತಂಡದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಸತತ ಕಳಪೆ ಫಾರ್ಮ್ ಕ್ರಿಕೆಟ್ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಐತಿಹಾಸಿಕ ಸಾಧನೆಗೈಯಲು ಪ್ರತಿಯೊಬ್ಬ ಬೌಲರ್‌ನ ಕೊಡುಗೆ ಅತ್ಯಗತ್ಯವಾಗಿರುವ ಈ ಫೈನಲ್ ಪಂದ್ಯದಲ್ಲಿ, ವರುಣ್ ಅವರ ವೈಫಲ್ಯವು ಟೀಮ್ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂಬ ಭೀತಿ ಶುರುವಾಗಿದೆ.
ಬುಮ್ರಾ ಮೇಲೆ ತೀವ್ರ ಒತ್ತಡ: ಅನಿಲ್ ಕುಂಬ್ಳೆ
ಸೂಪರ್-8 ಹಂತದ ಪಂದ್ಯಗಳು ಆರಂಭವಾದಾಗಿನಿಂದ ವರುಣ್ ಚಕ್ರವರ್ತಿ ತಮ್ಮ ಮಿಸ್ಟರಿ ಸ್ಪಿನ್ ಮೋಡಿಯನ್ನು ಕಳೆದುಕೊಂಡಂತೆ ಕಾಣುತ್ತಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿರುವುದು ಅವರ ಆತ್ಮವಿಶ್ವಾಸದ ಕೊರತೆಯನ್ನು ಎತ್ತಿತೋರಿಸುತ್ತಿದೆ. ಈ ಕುರಿತು ‘ಇಎಸ್‌ಪಿಎನ್ ಕ್ರಿಕ್‌ಇನ್ಫೋ’ ಜೊತೆ ಮಾತನಾಡಿರುವ ಭಾರತದ ದಿಗ್ಗಜ ಸ್ಪಿನ್ನರ್ ಹಾಗೂ ಮಾಜಿ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ, ವರುಣ್ ವೈಫಲ್ಯದಿಂದ ಟೀಮ್ ಇಂಡಿಯಾದ ವೇಗದ ಬೌಲಿಂಗ್ ಅಸ್ತ್ರ ಜಸ್‌ಪ್ರೀತ್ ಬುಮ್ರಾ ಅವರ ಮೇಲೆ ಅನಗತ್ಯ ಹೆಚ್ಚುವರಿ ಒತ್ತಡ ಬೀಳಲಿದೆ ಎಂದು ಎಚ್ಚರಿಸಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಕಬಳಿಸಿ ಎದುರಾಳಿಗಳನ್ನು ಕಟ್ಟಿಹಾಕುವ ಪ್ರಮುಖ ಅಸ್ತ್ರವಾಗಿದ್ದ ವರುಣ್ ಅವರೇ ಕೈಕೊಟ್ಟರೆ, ಕಿವೀಸ್ ಬ್ಯಾಟರ್‌ಗಳು ಸುಲಭವಾಗಿ ರನ್ ಕಲೆಹಾಕಲಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್‌ಗಳು ಕೇವಲ ಬುಮ್ರಾ ಅವರ ನಾಲ್ಕು ಓವರ್‌ಗಳ ಬಗ್ಗೆ ಮಾತ್ರ ಎಚ್ಚರ ವಹಿಸಿದರೆ ಸಾಕು, ವರುಣ್ ಓವರ್‌ಗಳನ್ನು ಸುಲಭವಾಗಿ ದಂಡಿಸಬಹುದು ಎಂಬ ಮನಸ್ಥಿತಿಗೆ ಬಂದರೆ, ಅದು ಭಾರತೀಯ ನಾಯಕನ ಪಾಲಿಗೆ ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ನಿರ್ಮಿಸುತ್ತದೆ ಎಂದು ಕುಂಬ್ಳೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಆರನೇ ಬೌಲಿಂಗ್ ಆಯ್ಕೆಯ ಕೊರತೆ
ಇದೇ ಚರ್ಚೆಯಲ್ಲಿ ಪಾಲ್ಗೊಂಡು ವಿಶ್ಲೇಷಣೆ ಮಾಡಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್, ಪ್ರಸಕ್ತ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಕಾಡುತ್ತಿರುವ ಬಹುದೊಡ್ಡ ದೌರ್ಬಲ್ಯವೊಂದನ್ನು ಬೊಟ್ಟು ಮಾಡಿದ್ದಾರೆ. ಭಾರತ ತಂಡವು ಬಹುಪಾಲು ತನ್ನ ಪ್ರಮುಖ ಐವರು ಬೌಲರ್‌ಗಳನ್ನೇ ಅತಿಯಾಗಿ ನೆಚ್ಚಿಕೊಂಡಿದೆ. ಆದರೆ, ಪ್ರಮುಖ ಪಂದ್ಯದಲ್ಲಿ ಆ ಐವರ ಪೈಕಿ ಒಬ್ಬರು ವಿಫಲವಾದರೂ, ನಾಯಕ ಅನಿವಾರ್ಯವಾಗಿ ಆರನೇ ಬೌಲರ್‌ನ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ಆರನೇ ಬೌಲರ್‌ನ ಕೊರತೆಯೇ ಎದುರಾಳಿ ತಂಡಗಳಿಗೆ ವರದಾನವಾಗಲಿದ್ದು, ಅವರು ದುರ್ಬಲ ಓವರ್‌ಗಳನ್ನು ಗುರಿಯಾಗಿಸಿಕೊಂಡು ಭಾರತದ ಬೌಲಿಂಗ್ ಪಡೆಯನ್ನು ತೀವ್ರ ಒತ್ತಡಕ್ಕೆ ಸಿಲುಕಿಸಲಿದ್ದಾರೆ. ಕಳೆದ ಎರಡು-ಮೂರು ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ ಅವರ ಫಾರ್ಮ್ ಮಂಕಾಗಿರುವುದು ದೊಡ್ಡ ಚಿಂತೆಯ ವಿಷಯವಾಗಿದೆ. ತಂಡವು ಕೇವಲ ಐವರು ಬೌಲರ್‌ಗಳನ್ನು ಕಣಕ್ಕಿಳಿಸಿದಾಗ, ಅವರೆಲ್ಲರೂ ಪ್ರತಿ ಪಂದ್ಯದಲ್ಲೂ ಶ್ರೇಷ್ಠ ಪ್ರದರ್ಶನ ನೀಡುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ. ಮ್ಯಾಚ್-ಅಪ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಎದುರಾಳಿಗಳು, ಫಾರ್ಮ್ ಕಳೆದುಕೊಂಡಿರುವ ಬೌಲರ್ ಅನ್ನು ಅಸ್ತ್ರವನ್ನಾಗಿಸಿಕೊಂಡು ದಾಳಿ ನಡೆಸಲಿದ್ದಾರೆ ಎಂದು ಡು ಪ್ಲೆಸಿಸ್ ವಿವರಿಸಿದ್ದಾರೆ.
ವರುಣ್ ತಂತ್ರಗಾರಿಕೆಯಲ್ಲಿ ಬದಲಾವಣೆ ಅತ್ಯಗತ್ಯ: ರವಿಚಂದ್ರನ್ ಅಶ್ವಿನ್ ಸಲಹೆ
ಎದುರಾಳಿ ಬ್ಯಾಟರ್‌ಗಳು ಇನಿಂಗ್ಸ್‌ನ ಆರಂಭದಲ್ಲೇ ತಮ್ಮ ಮೇಲೆ ಆಕ್ರಮಣಕಾರಿ ಆಟಕ್ಕೆ ಮುಂದಾದರೆ, ವರುಣ್ ಚಕ್ರವರ್ತಿ ಬಹುಬೇಗನೆ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಟೀಮ್ ಇಂಡಿಯಾದ ಹಿರಿಯ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಒಮ್ಮೆ ಒತ್ತಡಕ್ಕೆ ಸಿಲುಕಿದರೆ, ಮಿಸ್ಟರಿ ಸ್ಪಿನ್ನರ್‌ಗೆ ತಾಳ್ಮೆ ಕಾಯ್ದುಕೊಂಡು ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವುದು ಅತ್ಯಂತ ಕಷ್ಟಕರವಾಗುತ್ತದೆ. ತಮ್ಮ ‘ಆಶ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ಬಗ್ಗೆ ವಿಸ್ತೃತವಾಗಿ ಮಾತನಾಡಿರುವ ಅವರು, ಎಡಗೈ ಬ್ಯಾಟರ್‌ಗಳಿಗೆ ‘ರೌಂಡ್ ದಿ ವಿಕೆಟ್’ನಿಂದ ಬೌಲಿಂಗ್ ಮಾಡುವುದನ್ನು ವರುಣ್ ತಕ್ಷಣವೇ ನಿಲ್ಲಿಸಬೇಕು ಎಂದು ಪ್ರಮುಖ ಸಲಹೆ ನೀಡಿದ್ದಾರೆ. ಆ ನಿರ್ದಿಷ್ಟ ಆ್ಯಂಗಲ್‌ನಿಂದ ಬೌಲ್ ಮಾಡಿದಾಗ ಎಡಗೈ ಬ್ಯಾಟರ್‌ಗಳಿಗೆ ಚೆಂಡನ್ನು ಸುಲಭವಾಗಿ ದಂಡಿಸಲು ಅವಕಾಶ ಸಿಗುತ್ತದೆ. ಬೌಲಿಂಗ್ ವೇಳೆ ನಿಖರವಾದ ಲೈನ್ ಮತ್ತು ಲೆಂಗ್ತ್ ಕಾಯ್ದುಕೊಳ್ಳುವುದರ ಜೊತೆಗೆ ವೇಗದ ಬದಲಾವಣೆಗಳು ಬಹಳ ಮುಖ್ಯವಾಗಿರುತ್ತವೆ. ಹಾಗಾಗಿ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಕೂಡಲೇ ವರುಣ್ ಜೊತೆ ಚರ್ಚೆ ನಡೆಸಿ, ಫೈನಲ್ ಪಂದ್ಯಕ್ಕೂ ಮುನ್ನ ಅವರ ಬೌಲಿಂಗ್ ತಂತ್ರಗಾರಿಕೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲು ನೆರವಾಗಬೇಕು ಎಂದು ಅಶ್ವಿನ್ ಸೂಚಿಸಿದ್ದಾರೆ.
ಇದನ್ನೂ ಓದಿ : ‘ಮ್ಯಾಚ್ ವಿನ್ನಿಂಗ್’ ಮಂತ್ರ ಬಿಚ್ಚಿಟ್ಟ ನಾಯಕ ಸೂರ್ಯಕುಮಾರ್ ಯಾದವ್


















