ಬೆಂಗಳೂರು: ಮೋಡಿ ಮಾಡುವಂತಿದೆ ಕಾಜಿರಂಗ: “ಇದು ನಿಜಕ್ಕೂ ಮುದ್ದಾದ, ಅದ್ಭುತ ಲೋಕ. ಇಲ್ಲಿನ ಪ್ರಶಾಂತತೆ ಮತ್ತು ವನ್ಯಜೀವಿ ಸಂಪತ್ತು ನನ್ನನ್ನು ಮೋಡಿ ಮಾಡಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು,” ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ (Anil Kumble) ಉದ್ಗಾರ ತೆಗೆದರು.
ಪ್ರಸ್ತುತ ಅಸ್ಸಾಂ ಪ್ರವಾಸದಲ್ಲಿರುವ ಕುಂಬ್ಳೆ, ತಮ್ಮ ಪತ್ನಿಯೊಂದಿಗೆ ವಿಶ್ವವಿಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ (Kaziranga National Park) ಭೇಟಿ ನೀಡಿದರು. ಮಂಗಳವಾರ ಬಾಗೋರಿ ಅರಣ್ಯ ವಲಯದಲ್ಲಿ ಜೀಪ್ ಸಫಾರಿ ನಡೆಸಿದ ಅವರು, ಪ್ರಕೃತಿಯ ಮಡಿಲಲ್ಲಿ ವಿಹರಿಸಿದರು. ಈ ವೇಳೆ ಅಪರೂಪದ ಒಂಟಿ ಕೊಂಬಿನ ಘೇಂಡಾಮೃಗಗಳು (Rhinos), ಹೂಲಾಕ್ ಗಿಬ್ಬನ್ಗಳು ಮತ್ತು ವೈವಿಧ್ಯಮಯ ಪಕ್ಷಿ ಸಂಕುಲವನ್ನು ಕಂಡು ರೋಮಾಂಚನಗೊಂಡಿದ್ದಾರೆ.
“ಭಾರತದಾದ್ಯಂತ ನೈಸರ್ಗಿಕ ಸೌಂದರ್ಯವಿದೆ. ಆದರೆ, ಕಾಜಿರಂಗದಲ್ಲಿ ವನ್ಯಜೀವಿಗಳನ್ನು ಇಷ್ಟು ಹತ್ತಿರದಿಂದ ನೋಡುವ ಅನುಭವವೇ ಬೇರೆ. ಉದ್ಯಾನವನದ ನಿರ್ವಹಣೆ ಮತ್ತು ಸ್ವಚ್ಛತೆ ಅತ್ಯುತ್ತಮವಾಗಿದೆ,” ಎಂದು ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ, ಅರಣ್ಯ ರಕ್ಷಣೆಯಲ್ಲಿ ಮಹಿಳಾ ಸಿಬ್ಬಂದಿಯ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ.
ಅಸ್ಸಾಂನ ಕ್ರಿಕೆಟ್ ಪ್ರತಿಭೆಗಳ ಬಗ್ಗೆ ಮೆಚ್ಚುಗೆ
ಪ್ರವಾಸದ ನಡುವೆಯೂ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಮರೆಯದ ಕುಂಬ್ಳೆ, ಅಸ್ಸಾಂನ ಯುವ ಪ್ರತಿಭೆಗಳಾದ ರಿಯಾನ್ ಪರಾಗ್ ಮತ್ತು ವಿಕೆಟ್ ಕೀಪರ್ ಉಮಾ ಚೆಟ್ರಿ ಬಗ್ಗೆ ಭರವಸೆ ವ್ಯಕ್ತಪಡಿಸಿದರು. “ರಿಯಾನ್ ಪರಾಗ್ ಈಗಾಗಲೇ ಟೀಂ ಇಂಡಿಯಾ ಪರ ಆಡಿದ್ದು, ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಸ್ಸಾಂನಿಂದ ಇಂತಹ ಪ್ರತಿಭೆಗಳು ಬೆಳಕಿಗೆ ಬರುತ್ತಿರುವುದು ಸಂತಸದ ವಿಷಯ,” ಎಂದು ಹೇಳಿದರು.
ಸ್ಥಳೀಯ ಸಂಸ್ಕೃತಿಗೆ ಗೌರವ
ಎರಡು ದಿನಗಳ ಪ್ರವಾಸದಲ್ಲಿ ಕುಂಬ್ಳೆ ದಂಪತಿ, ಬಾಗೋರಿ ವಲಯದ ಪ್ರವೇಶ ದ್ವಾರದಲ್ಲಿರುವ ಸಾಂಪ್ರದಾಯಿಕ ಕೈಮಗ್ಗ ಮಳಿಗೆಗಳಿಗೂ ಭೇಟಿ ನೀಡಿ ಸ್ಥಳೀಯ ಕರಕುಶಲತೆಯನ್ನು ವೀಕ್ಷಿಸಿದರು. ಹಳೆಯ ನೆನಪುಗಳಿಗೆ ಜಾರಿದ ಕುಂಬ್ಳೆ, ಆಟಗಾರನಾಗಿ ಹಿಂದೆ ಅಸ್ಸಾಂಗೆ ಬಂದಿದ್ದನ್ನು ಸ್ಮರಿಸಿಕೊಂಡರು. “ವರ್ಷಗಳು ಕಳೆದಂತೆ ಇಲ್ಲಿನ ಕ್ರೀಡಾಂಗಣಗಳು ಮತ್ತು ನಗರ ಹೇಗೆ ಬದಲಾಗಿದೆ ಎಂಬುದನ್ನು ನೋಡಲು ಕುತೂಹಲವಿದೆ,” ಎಂದರು.
ಇದನ್ನೂ ಓದಿ: ಹೊಸ ಗೆಳತಿ ಮಹಿಕಾ ಬೆರಳಲ್ಲಿ ಪಾಂಡ್ಯ ಕೊಟ್ಟ ವಜ್ರದ ಉಂಗುರ ; ನಿಶ್ಚಿತಾರ್ಥದ ಗುಸುಗುಸು!



















