ಕ್ಯಾಲಿಫೋರ್ನಿಯಾ ; ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಕೈತುಂಬಾ ಸಂಬಳದ ಉದ್ಯೋಗ ಪಡೆದು ಬದುಕು ರೂಪಿಸಿಕೊಳ್ಳುತ್ತಿದ್ದ ಆಂಧ್ರಪ್ರದೇಶ ಮೂಲದ 26 ವರ್ಷದ ಯುವ ಸಾಫ್ಟ್‌ವೇರ್ ಎಂಜಿನಿಯರ್ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಶನಿವಾರವಷ್ಟೇ ತಮ್ಮ 26ನೇ ಜನ್ಮದಿನ ಆಚರಿಸುತ್ತಾ, ಸ್ನೇಹಿತರೊಂದಿಗೆ ಕ್ಯಾಲಿಫೋರ್ನಿಯಾದ ಜಲಪಾತವೊಂದಕ್ಕೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ನೀರಿನ ಸೆಳೆತದಿಂದಾಗಿ ಈ ಆಕಸ್ಮಿಕ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೃತ ಯುವಕನನ್ನು ಸಿಂಗಿರೆಡ್ಡಿ ಸಾಯಿ ಶ್ರೀಹರಿಕೃಷ್ಣ ಎಂದು ಗುರುತಿಸಲಾಗಿದೆ.
ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದ ಅವರು, ಇತ್ತೀಚೆಗಷ್ಟೇ ಸೆಂಟ್ ಲೂಯಿಸ್‌ನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. “ಕೆಲವೇ ತಿಂಗಳ ಹಿಂದಷ್ಟೇ ಅವನಿಗೆ ಉದ್ಯೋಗ ಸಿಕ್ಕಿತ್ತು. ವೃತ್ತಿಜೀವನ ಆರಂಭಿಸಿದ ಖುಷಿಯಲ್ಲಿ ಅವನಿದ್ದ. ಅಷ್ಟರಲ್ಲೇ ಇಂಥ ಅವಘಡ ಸಂಭವಿಸಿತು” ಎಂದು ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಆಗಿದ್ದೇನು?
ಈಜುವುದರಲ್ಲಿ ಅತೀವ ಆಸಕ್ತಿ ಹೊಂದಿದ್ದ ಶ್ರೀಹರಿಕೃಷ್ಣ, ಹುಟ್ಟುಹಬ್ಬದ ಖುಷಿಯಲ್ಲಿ ಸ್ನೇಹಿತರೊಂದಿಗೆ ಜಲಪಾತದ ನೀರಿಗಿಳಿದಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದರು. ತಕ್ಷಣವೇ ಎಚ್ಚೆತ್ತ ಸ್ನೇಹಿತರು ಅವರನ್ನು ರಕ್ಷಿಸಲು ಹರಸಾಹಸ ಪಟ್ಟರಾದರೂ, ನೀರಿನ ತೀವ್ರ ಸೆಳೆತದ ಮುಂದೆ ಅವರ ಪ್ರಯತ್ನ ಸಫಲವಾಗಲಿಲ್ಲ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ತುರ್ತು ರಕ್ಷಣಾ ಪಡೆ, ಶೋಧ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದೆ.
ತಾಯ್ನಾಡಿಗೆ ಮೃತದೇಹ ತರಲು ಸಿದ್ಧತೆ
ಹೊಸ ಜೀವನದ ಹೊಸ್ತಿಲಲ್ಲಿದ್ದ ಮಗನ ಅಕಾಲಿಕ ಮರಣವು ಆಂಧ್ರಪ್ರದೇಶದಲ್ಲಿರುವ ಪೋಷಕರಾದ ಸಿಂಗಿರೆಡ್ಡಿ ಶ್ರೀನಿವಾಸರಾವ್ ಮತ್ತು ರಮಾದೇವಿ ಅವರನ್ನು ತೀವ್ರ ಆಘಾತಕ್ಕೀಡುಮಾಡಿದೆ. ಸದ್ಯ, ಅಮೆರಿಕದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮೃತದೇಹವನ್ನು ಆದಷ್ಟು ಬೇಗ ತಾಯ್ನಾಡಿಗೆ ತರಲು ಅಗತ್ಯ ಕಾನೂನು ಪ್ರಕ್ರಿಯೆಗಳು ಮತ್ತು ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಇದನ್ನೂ ಓದಿ : ಸ್ಲೋ ಫಿಫ್ಟಿ, ಕೋಪದಲ್ಲಿ ಹೆಲ್ಮೆಟ್-ಗ್ಲೌಸ್ ಬಿಸಾಡಿದ ಕೊಹ್ಲಿ.. ವಿಡಿಯೊ ವೈರಲ್!



















