ಪ್ರಕಾಶಂ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಎರಡೂ ಕೈಗಳನ್ನು ಮೇಲಕ್ಕೆ ಕಟ್ಟಿ ಹಾಕಿ, ಬೆಲ್ಟ್‌ನಿಂದ ಮನಬಂದಂತೆ ಥಳಿಸಿ, ಒದ್ದು ಕ್ರೌರ್ಯ ಮೆರೆದಿರುವ ಆಘಾತಕಾರಿ ಘಟನೆ ನಡೆದಿದೆ. ನೆರೆಹೊರೆಯವರು ತಡೆಯಲು ಬಂದರೂ ಲೆಕ್ಕಿಸದೆ ಹಲ್ಲೆ ಮುಂದುವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ವಿಡಿಯೋದಲ್ಲಿ, ಗುರುನಾಥಂ ಎಂಬ ವ್ಯಕ್ತಿ ತನ್ನ ಪತ್ನಿಯ ಕೈಗಳನ್ನು ಕಟ್ಟಿ, ಬೆಲ್ಟ್‌ನಿಂದ ಬಾರಿಸುತ್ತಾ, ನೋವಿನಿಂದ ಚೀರುತ್ತಿದ್ದ ಆಕೆಯ ಮೇಲೆ ಪದೇ ಪದೇ ಕಾಲುಗಳಿಂದ ಒದೆಯುತ್ತಿರುವುದು ದಾಖಲಾಗಿದೆ. ಇದನ್ನು ಕಂಡ ನೆರೆಹೊರೆಯವರು ಮಧ್ಯಪ್ರವೇಶಿಸಿ ತಡೆಯಲು ಯತ್ನಿಸಿದರೂ, ಆತ ತನ್ನ ಹಲ್ಲೆಯನ್ನು ನಿಲ್ಲಿಸಲಿಲ್ಲ.
ವರದಿಗಳ ಪ್ರಕಾರ, ಹಲ್ಲೆಗೊಳಗಾದ ಮಹಿಳೆ ನಾಲ್ಕು ಮಕ್ಕಳ ತಾಯಿಯಾಗಿದ್ದು, ಬೇಕರಿಯೊಂದರಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾಳೆ. ಆಕೆಯ ಪತಿ ಗುರುನಾಥಂ ಹೈದರಾಬಾದ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ವಾಸಿಸುತ್ತಿದ್ದು, ಆಗಾಗ ಗ್ರಾಮಕ್ಕೆ ಬಂದು ಪತ್ನಿಗೆ ಕಿರುಕುಳ ನೀಡಿ, ಆಕೆ ದುಡಿದ ಹಣವನ್ನು ಕಿತ್ತುಕೊಳ್ಳುತ್ತಿದ್ದನು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪತಿಯ ಅನೈತಿಕ ಸಂಬಂಧದ ಶಂಕೆ
ಪೊಲೀಸರ ಪ್ರಕಾರ, ಆರೋಪಿ ಬಾಲ್ರಾಜು (ಗುರುನಾಥಂ) ತನ್ನ ಪತ್ನಿ ಭಾಗ್ಯಮ್ಮಳ ಅನೈತಿಕ ಸಂಬಂಧವನ್ನು ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆತ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹಣ ತರುವಂತೆ ಪತ್ನಿಗೆ ಕೇಳಿದ್ದ. ಆದರೆ, ನಾಲ್ಕು ಮಕ್ಕಳನ್ನು ತಾನೇ ಸಾಕುತ್ತಿರುವುದರಿಂದ ಹಣ ನೀಡಲು ಸಾಧ್ಯವಿಲ್ಲ ಎಂದು ಭಾಗ್ಯಮ್ಮ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆತ, ಆಕೆಯನ್ನು ಕಂಬಕ್ಕೆ ಕಟ್ಟಿಹಾಕಿ ಹೀನಾಯವಾಗಿ ಥಳಿಸಿದ್ದಾನೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 85ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.



















