ಕಲಬುರಗಿ: ವೃದ್ಧೆಯೊಬ್ಬರು ಜೈಲಿನಿಂದ ಹೊರ ಬಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
93 ವರ್ಷದ ವೃದ್ಧೆಯೊಬ್ಬರು ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದರು. ಆದರೆ, ಈಗ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಸೊಸೆಗೆ ಕಿರಕುಳ ನೀಡಿದ ಪ್ರಕರಣದಲ್ಲಿ ನಾಗಮ್ಮ ಎಂಬ ವೃದ್ಧೆ ಜೈಲು ವಾಸದಲ್ಲಿದ್ದರು. ಸೊಸೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಾಗಮ್ಮ ಹಾಗೂ ಕುಟುಂಬಸ್ಥರ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಬರೋಬ್ಬರಿ 26 ವರ್ಷಗಳಿಂದ ನಡೆದಿತ್ತು. ಆನಂತರ ನಾಗಮ್ಮ ಅವರಿಗೆ 92 ವರ್ಷ ವಯಸ್ಸಾದ ವೇಳೆ ಅವರಿಗೆ ಶಿಕ್ಷೆ ಪ್ರಕಟವಾಗಿತ್ತು. ಹೀಗಾಗಿ ನಾಗಮ್ಮ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದರು. ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಜೈಲಿಗೆ ಭೇಟಿ ನೀಡಿದ್ದರು. ಈ ವೇಲೆ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿದ್ದರು. ಹೀಗಾಗಿ ನ. 1ರಂದು ಪೆರೋಲ್ ನೀಡಲಾಗಿತ್ತು. ಆನಂತರ ಅವರು ಮನೆಗೆ ತೆರಳಿದ್ದರು. ಆದರೆ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಾರೆ.