ತುಮಕೂರು : ಕೂಡಿಟ್ಟಿದ್ದ ಸ್ವಂತ ಹಣದಲ್ಲಿ ಖರೀದಿಸಿದ್ದ ಸೈಟ್ ನ್ನು ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ದಾನ ಮಾಡಿ ಮಾದರಿ ಎನಿಸಿದ್ದಾರೆ.
ಜಿಲ್ಲೆಯ ಓಬೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಸೈಟ್ ದಾನ ಮಾಡಿದ ಮಹಿಳೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಓಬೇನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಇತ್ತು. ಕೆಲವು ದಿನ ಗ್ರಾಮದ ದೇಗುಲದಲ್ಲಿ ಕೂಡ ಕಾರ್ಯ ನಿರ್ವಹಣೆ ಮಾಡಿದ್ದಾರೆ.
2015ರಿಂದ ಅಂಗನವಾಡಿ ಕಾರ್ಯಕರ್ತೆ ಆಗಿ ಶಾಂತಮ್ಮ ನೇಮಕಗೊಂಡಿದ್ದರು. ಕಾರ್ಯಕರ್ತೆ ಕೆಲಸದ ಸಂಬಳದಲ್ಲಿ ಕೂಡಿಟ್ಟ ಹಣದಲ್ಲಿ ಶಾಂತಮ್ಮ ಸೈಟ್ ಖರೀದಿಸಿದ್ದರು. ಈಗ ಅದೇ ಜಾಗವನ್ನು ಅಂಗನವಾಡಿಗೆ ದಾನವಾಗಿ ನೀಡಿದ್ದಾರೆ. ಶಾಂತಮ್ಮ ಅವರು ದಾನ ಮಾಡಿರುವ ನಿವೇಶನದ ಇ-ಖಾತೆಯ ಪ್ರತಿಯನ್ನು ತುಮಕೂರು ಸಿಡಿಪಿಒ ಸುನೀತಾ ಅವರಿಗೆ ಶಾಂತಮ್ಮ ಹಸ್ತಾಂತರ ಮಾಡಿದ್ದಾರೆ. ಅವರ ಈ ಔದಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.



















