ಪ್ರಧಾನಿ ಮೋದಿ ಅವರನ್ನು ಇಡೀ ಜಗತ್ತೇ ಈಗ ವಿಶ್ವ ನಾಯಕ ಎಂದು ಬಣ್ಣಿಸುತ್ತಿದೆ. ಕೇವಲ ಒಂದು ಅವಕಾಶ ಸಿಕ್ಕರೆ ಸಾಕು, ಜನರ ಹಣ ಲೂಟಿ ಮಾಡಿ ಕೋಟ್ಯಾಧಿಪತಿಯಾಗುವ ನಾಯಕರ ಮಧ್ಯೆ ಮೋದಿ ಆದರ್ಶವಾಗಿ ನಿಂತಿರುವುದೇ ಈ ಬಣ್ಣನೆಗೆ ಕಾರಣವಾಗಿರುವದರಲ್ಲಿ ಸಂಶಯವೇ ಇಲ್ಲ.
ಇಂದು ಸೈದ್ಧಾಂತಿಕ ತ್ವತ್ವದ ರಾಜಕಾರಣ ಸಂಪೂರ್ಣವಾಗಿ ನಾಶವಾಗಿ ಹೋಗಿದೆ ಎಂಬುವುದರ ನಡುವೆ ಇಡೀ ವಿಶ್ವಕ್ಕೆ ಮೋದಿ ಏಕಮಯ ಸರಳ ವ್ಯಕ್ತಿತ್ವದ ನಾಯಕರಾಗಿ ಕಾಣಿಸುತ್ತಿದ್ದಾರೆ ಎಂಬುವುದನ್ನು ಅವರು ಗಳಿಸಿರುವ ಆಸ್ತಿಯೇ ಸಾರಿ ಸಾರಿ ಹೇಳುವಂತಿದೆ.
ನಮ್ಮ ದೇಶದ ಪ್ರಧಾನಿ ಇನ್ನುಳಿದ ದೇಶಗಳ ಪ್ರಧಾನಿ, ಅಧ್ಯಕ್ಷರಂತೆ ಹತ್ತಾರು, ನೂರಾರು, ಸಾವಿರಾರು ಕೋಟಿ ಒಡೆಯರಲ್ಲ. ನಮ್ಮ ದೇಶದ ಪ್ರಧಾನಿ ಬಳಿ ಇರುವುದು ಕೇವಲ 3.2 ಕೋಟಿ ರೂ. ಮೌಲ್ಯದ ಆಸ್ತಿಯಷ್ಟೇ. ಪಿತ್ರಾರ್ಜಿತ ಆಸ್ತಿಯಾಗಲಿ, ಚರಾಸ್ತಿಯಾಗಲಿ ಅವರಿಗಿಲ್ಲ. ಇದಷ್ಟೇ ಅಲ್ಲ, ಸ್ವಂತ ಮನೆ, ಕಾರು ಕೂಡ ಅವರಿಗಿಲ್ಲ.
ತಮ್ಮ ಆಸ್ತಿ ಗಳಿಕೆಯಲ್ಲಿ ಸಾಧು ಆದ ಪ್ರಧಾನಿ, ಜನರ ಆದಾಯ ಹೆಚ್ಚಿಸಿರುವುದಂತೂ ಸುಳ್ಳುಲ್ಲ. ಮೋದಿ 2014ರಲ್ಲಿ ಪ್ರಧಾನಿಯಾಗುವ ವೇಳೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಅರ್ಥವ್ಯವಸ್ಥೆಯು 11ನೇ ಸ್ಥಾನದಲ್ಲಿತ್ತು. ಆದರೆ, ಈಗ ಭಾರತ 5ನೇ ಆರ್ಥಿಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಇಲ್ಲಿ ಜನರ ಆರ್ಥಿಕತೆಯನ್ನು ಮೋದಿ ಹೆಚ್ಚಿಸಿ ದೇಶವನ್ನು ಬಲಿಷ್ಠ ಮಾಡಿದರೇ ಹೊರತು, ತಮ್ಮ ಆಸ್ತಿಯನ್ನಲ್ಲ. ದೇಶದಲ್ಲಿನ ಜನರ ತಲಾ ಆದಾಯ 2014ರಲ್ಲಿ 88,647 ರೂ. ಇತ್ತು. ಆದರೆ, ಈಗ ನಮ್ಮ ದೇಶದ ಜನರ ತಲಾ ಆದಾಯ 2.14 ಲಕ್ಷ ರೂ. ಇದೆ. ಇನ್ನೊಂದು ಸಂತಸದ ಸಂಗತಿ ಎಂದರೆ ಕೋವಿಡ್ ನಂತರ ಸಾಂಕ್ರಾಮಿಕ ಸಂಕಟದ ಮಧ್ಯೆಯೂ ದೇಶದ ಜಿಡಿಪಿ ಎಲ್ಲಿಯೂ ಬೀಳದೆ ಏರುಗತಿಯಲ್ಲಿಯೇ ಕಂಡು ಬಂದಿತು. 2014ರಲ್ಲಿ 2.04 ಟ್ರಿಲಿಯನ್ ಇದ್ದ ಜಿಡಿಪಿ ದರ 2024ರಲ್ಲಿ 3.75 ಟ್ರಿಲಿಯನ್ ರೂ.ಗೆ ಏರಿಕೆಯಾಗಿರುವುದು ಯಾವ ನಾಯಕನೂ ಕನಿಸಿನಲ್ಲಿಯೂ ಊಹಿಸದ ಸ್ಥಿತಿ. ಮುಂದಿನ ಒಂದೇ ವರ್ಷದಲ್ಲಿ ದೇಶದ ಜಿಡಿಪಿ 4.34 ಟ್ರಿಲಿಯನ್ ದಾಟುವ ನಿರೀಕ್ಷೆ ಇದೆ. ಇದಲ್ಲವೇ ದೇಶದ ಸಾಧನೆ, ದೇಶದ ಅಭಿವೃದ್ಧಿ, ಪ್ರಧಾನಿಯೊಬ್ಬರ ಕಾರ್ಯವೈಖರಿ?
ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿಯ ವಿವರದ ಮಾಹಿತಿ ನೀಡಿದ್ದಾರೆ. ಅದರ ಮಾಹಿತಿಯಂತೆ ಮೋದಿ ಅವರ ಒಟ್ಟು ಆಸ್ತಿ ಮೌಲ್ಯ 3.2 ಕೋಟಿ ರೂ. ಇದರಲ್ಲಿ 2.86 ಕೋಟಿ ರೂ. ನಿಶ್ಚಿತ ಠೇವಣಿ. ಸುಮಾರು 9.12 ಲಕ್ಷ ರೂ. ಹಣವನ್ನು ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಗಾಂಧಿನಗರ, ವಾರಾಣಸಿಯಲ್ಲಿ 2 ಬ್ಯಾಂಕ್ ಖಾತೆಗಳಿವೆ. ಆ ಎರಡು ಅಕೌಂಟ್‌ಗಳಲ್ಲಿರುವುದು 80,304 ರೂಪಾಯಿ. ಸುಮಾರು 53 ಸಾವಿರ ರೂ. ನಗದು ಕೈಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.
ಅಲ್ಲದೇ, ಪ್ರಧಾನಿ ಮೋದಿಗೆ ಆದಾಯದ ಮೂಲ ಇರುವುದು ಒಂದೇ. ಪ್ರಧಾನಿಯಾಗಿ ಪಡೆಯುತ್ತಿರುವ ವೇತನವೇ ಅವರ ಆದಾಯ. ಹೀಗಾಗಿ ಅವರ ವಾರ್ಷಿಕ ಆದಾಯ 23.56 ಲಕ್ಷ ರೂಪಾಯಿ. ಬರುತ್ತಿರುವ ವರಮಾನದಲ್ಲಿಯೇ ಜೀವನ ನಿರ್ವಹಣೆ ಜತೆಗೆ ವಿವಿಧ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಳಿ 45 ಗ್ರಾಂ ತೂಕದ 4 ಚಿನ್ನದ ಉಂಗುರಗಳಿವೆ. ಮೋದಿಗೆ ಯಾವುದೇ ದ್ವಿಚಕ್ರ ವಾಹನ ಅಥವಾ ಕಾರು ಇಲ್ಲ. ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ. ಪ್ರಧಾನಿ ಮೋದಿ ಕಳೆದ 5 ವರ್ಷಗಳಲ್ಲಿ ಗಳಿಸಿದ ಆಸ್ತಿ 84 ಲಕ್ಷ ರೂ. ಮಾತ್ರ.
ಪ್ರಧಾನಿ ಮೋದಿ 2018-19ರಲ್ಲಿ 11.14 ಲಕ್ಷ ರೂ., 2019-20ರಲ್ಲಿ 17.21 ಲಕ್ಷ ರೂ., 2020-21ರಲ್ಲಿ 17.08 ಲಕ್ಷ ರೂ., 2021-22ರಲ್ಲಿ 15.42 ಲಕ್ಷ ರೂ., 2022-23ರಲ್ಲಿ 23.57 ಲಕ್ಷ ರೂ. ಹಣ ಹೊಂದಿದ್ದಾರೆ.
10 ವರ್ಷ ಪ್ರಧಾನಿ, 13 ವರ್ಷ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರ ಬಳಿ ಸ್ವಂತ ಮನೆಯೇ ಇಲ್ಲ. ಭೂಮಿ ಇಲ್ಲ. ಪಿತ್ರಾರ್ಜಿತ ಆಸ್ತಿ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ವರೆಗೆ ಮೋದಿ ಅವರ ಬಳಿ ಒಂದು ಪ್ಲಾಟ್ ಇತ್ತು. ಆದರೆ, ಅದನ್ನು ಅವರು ದಾನ ಮಾಡಿದ್ದಾರೆ. ನಮ್ಮ ದೇಶದ ಪ್ರಧಾನಿ ಇನ್ನುಳಿದ ನಾಯಕರಿಗಿಂತ ತೀರಾ ಬಡ ನಾಯಕ ಎಂಬುವುದು ಸುಳ್ಳಲ್ಲ. ನಾಯಕರ ಆಸ್ತಿಗಳು ಹತ್ತಾರು ಕೋಟಿಗಳಲ್ಲಿ ಹೆಚ್ಚಾಗುತ್ತಿದ್ದರೆ, ಮೋದಿ ಆಸ್ತಿ ಜನ ಸಾಮಾನ್ಯರ ಆಸ್ತಿಯಂತಿರುವುದನ್ನು ಭಾರತೀಯರು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ.
ಇನ್ನೂ ಕಾಂಗ್ರೆಸ್ ನಾಯಕ ಹಾಗೂ ಪ್ರಧಾನಿ ವಿರುದ್ಧ ಸದಾ ಹರಿಹಾಯುವ ರಾಹುಲ್ ಗಾಂಧಿ 4.2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಸೇರಿದಂತೆ 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇನ್ನೂ ವಿಶ್ವದ ನಾಯಕರ ಆಸ್ತಿ ನೋಡುವುದಾದರೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮೂಲತಃ ಉದ್ಯಮಿಯಾಗಿದ್ದು, 10 ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಅವರ ಆಸ್ತಿ ಕೇವಲ 4 ವರ್ಷಗಳಲ್ಲಿಯೇ 2 ಮಿಲಿಯನ್ ಡಾಲರ್ ಹೆಚ್ಚಳವಾಗಿದೆ. ಸತತ 20 ವರ್ಷಗಳಿಂದ ರಷ್ಯಾ ಅಧ್ಯಕ್ಷರಾಗಿರುವ ವ್ಲಾಡಿಮಿರ್ ಪುಟಿನ್ 1.4 ಶತಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಇವರ ಬಳಿ ಬರೋಬ್ಬರಿ 700 ಕಾರುಗಳು, 58 ಏರ್‌ಕ್ರಾಫ್ಟ್ ಇವೆ. ಒಂದು ವರದಿಯಂತೆ ಇವರು ವಿಶ್ವದ ಶ್ರೀಮಂತ ರಾಜಕಾರಣಿಯಾಗಿದ್ದಾರೆ.
ಭಾರತೀಯ ಮೂಲದ ವ್ಯಕ್ತಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ 6,661 ಕೋಟಿ ರೂ. ಒಡೆಯರಾಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ 10 ಸಾವಿರ ಕೋಟಿ ರೂ.ಗಳಷ್ಟು ಆಸ್ತಿ ಹೊಂದಿದ್ದಾರೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ 1 ಟ್ರಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಇವರು ಕೂಡ ವಿಶ್ವದ ಶ್ರೀಮಂತ ನಾಯಕ ಎನ್ನುವ ಖ್ಯಾತಿ ಗಳಿಸಿದ್ದಾರೆ. ಈತನ ಬಳಿ ಚಿನ್ನಾಭರಣಗಳೇ 1 ಶತಕೋಟಿ ಡಾಲರ್ ಬೆಲೆಬಾಳುವಂಥದ್ದು ಎಂಬ ಮಾಹಿತಿಯಿದೆ. ಇವರೆಲ್ಲರ ನಡುವೆ ಪ್ರಧಾನಿ ಮೋದಿ ದೇಶ ಕಟ್ಟುವ ನಾಯಕನಾಗಿ ಕಾಣುತ್ತಾರೆಯೇ ಹೊರತು, ಆಸ್ತಿ ಮಾಡುವ ಉದ್ಯಮಿ ಅಲ್ಲ, ದೇಶದ ಜನರ ವರಮಾನ ಹೆಚ್ಚಿಸುವ ನಾಯಕರಾಗಿ ಕಾಣುತ್ತಿದ್ದಾರೆಯೇ ಹೊರತು, ತಮ್ಮ ವರಮಾನ ಹೆಚ್ಚಿಸಿಕೊಳ್ಳುವ ಲೂಟಿ ರಾಜಕಾರಣಿ ಅಲ್ಲ ಎಂಬುವುದು ಅವರ ಆಸ್ತಿಯೇ ಸಾಬೀತು ಪಡಿಸುತ್ತಿದೆ.